ಮೈಸೂರು :  ರೈತರು ತಾವಿರುವ ಸ್ಥಳದಿಂದಲೇ ಸುಲಭವಾಗಿ ರಸಗೊಬ್ಬರವನ್ನು ಕಾಯ್ದಿರಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಫ್ರೇಮ್‌ವರ್ಕ್ ಫಾರ್ ಫರ್ಟಿಲೈಸರ್ ಸೇಲ್ (FFS - Framework for Fertilizer Sale) ಮೊಬೈಲ್ ಆ್ಯಪ್, ಡಿಸೆಂಬರ್ 15,2026 ರಿಂದ ಮೈಸೂರು ಜಿಲ್ಲೆಯಲ್ಲಿ ಅಧಿಕೃತವಾಗಿ ಚಾಲನೆ ದೊರೆಯಲಿದೆ.ರಸಗೊಬ್ಬರ ಖರೀದಿಸಲು ರೈತರು ತಮ್ಮ ಕೆಲಸ ಬಿಟ್ಟು ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯ ಇರುವುದಿಲ್ಲ. ಆ್ಯಪ್ ಮೂಲಕ ಹತ್ತಿರದ ಗೊಬ್ಬರದ ಅಂಗಡಿಯಲ್ಲಿ ಬುಕ್ ಮಾಡಿದಾಗ QR ಕೋಡ್ ಮತ್ತು ಟೋಕನ್ ಸಂಖ್ಯೆ ಸೃಷ್ಟಿಯಾಗುತ್ತದೆ. ಅದರಲ್ಲಿ ನಮೂದಾಗಿರುವ ಮಾನ್ಯತೆಯ ಅವಧಿಯೊಳಗೆ ಹೋಗಿ ಗೊಬ್ಬರ ಪಡೆಯಬಹುದು.ರೈತರಿಗೆ ಸಿಗಬೇಕಾದ ಗೊಬ್ಬರ ಅನ್ಯರ ಪಾಲಾಗುವುದನ್ನು ತಡೆಯಲು ಮತ್ತು ಯೂರಿಯಾ ಸೇರಿದಂತೆ ಇತರ ಗೊಬ್ಬರಗಳ ದುರ್ಬಳಕೆ ಹಾಗೂ ಕಾಳಸಂತೆ ಮಾರಾಟ ನಿಯಂತ್ರಿಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ಸ್ಮಾರ್ಟ್‌ಫೋನ್ ಅಥವಾ ಆ್ಯಪ್ ಬಳಕೆ ಕಷ್ಟವಾಗುವ ರೈತರು ಸಾಮಾನ್ಯ ಸೇವಾ ಕೇಂದ್ರಗಳು (CSC) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (PACCS) ರೈತ ಸಂಪರ್ಕ ಕೇಂದ್ರಗಳು (RSK) ಹಾಗೂ ಕೃಷಿ ಸಖಿಯರ ಮೂಲಕವೂ ಗೊಬ್ಬರ ಕಾಯ್ದಿರಿಸಬಹುದು. ಅಂಗಡಿ ಮಾಲೀಕರು ಕೂಡ ಬುಕಿಂಗ್‌ಗೆ ನೆರವಾಗಲಿದ್ದಾರೆ. ರೈತರಿಗೆ ಖುದ್ದಾಗಿ ತೆರಳಲು ಸಾಧ್ಯವಾಗದಿದ್ದರೆ, ಬುಕಿಂಗ್ ವೇಳೆಯೇ ಪ್ರತಿನಿಧಿಯ ಆಧಾರ್ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬಹುದು. ಪ್ರತಿನಿಧಿಯು QR ಕೋಡ್ ಹಾಗೂ ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಅಂಗಡಿಯಲ್ಲಿ ಬೆರಳಚ್ಚು ದೃಢೀಕರಣ (Biometric) ನೀಡಿ, UPI ಮೂಲಕ ಹಣ ಪಾವತಿಸಿ ಗೊಬ್ಬರ ಪಡೆಯಬಹುದು.ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಗೊಬ್ಬರದ ಬೇಡಿಕೆಯ ಮಾಹಿತಿ ಸರ್ಕಾರಕ್ಕೆ ಸುಲಭವಾಗಿ ಲಭ್ಯವಾಗುವುದರಿಂದ, ಬೇಡಿಕೆಗೆ ಅನುಗುಣವಾಗಿ ದಾಸ್ತಾನು ಮತ್ತು ಪೂರೈಕೆ ನಿರ್ವಹಿಸಲು ಸಾಧ್ಯವಾಗುತ್ತದೆ ಹಾಗೂ  ಗೂಗಲ್ ಪ್ಲೇ ಸ್ಟೋರ್‌ನಿಂದ Framework for Fertilizer Sale ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು  ಮೈಸೂರು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.