ಬೆಂಗಳೂರು : ನವೆಂಬರ್‌ 25 ರಂದು ಬೆಂಗಳೂರು ನಗರಕ್ಕೆ ಕಾವೇರಿ ನೀರು ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಜಲಮಂಡಳಿ  ತಿಳಿಸಿದೆ.ನೀರು ಸರಬರಾಜು ವ್ಯವಸ್ಥೆಗಳಲ್ಲಿ ತುರ್ತು ದುರಸ್ತಿ, ಬದಲಾವಣೆ ಹಾಗೂ ನಿರ್ವಹಣಾ ಕಾಮಗಾರಿಗಳನ್ನ ಕೈಗೊಂಡಿರುವ ಹಿನ್ನೆಲೆಯಲ್ಲಿ  ಕಾವೇರಿ ನೀರು   ಸರಬರಾಜನ್ನು ಸ್ಥಗಿತಗೊಳಿಸಲಾಗುತ್ತಿದೆ.  ಯೋಜನೆಯ ಎಲ್ಲಾ ಹಂತಗಳ ಜಲರೇಚಕ ಯಂತ್ರಗಳ   ನೀರಿನ ಸರಬರಾಜಿನಲ್ಲಿ ಬುಧವಾರ (ನ.25) ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.ಬೆಂಗಳೂರು ನಗರಕ್ಕೆ ನಿರಂತರವಾಗಿ ಮತ್ತು ಸುಗಮವಾಗಿ ನೀರು ಸರಬರಾಜು ಮಾಡುವ ಉದ್ದೇಶದಿಂದ ಕಾವೇರಿ ಮುಖ್ಯ ಕೆಲಸಗಳ ವಲಯದ ವ್ಯಾಪ್ತಿಯಲ್ಲಿರುವ ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿನ ನೀರು ಸರಬರಾಜು ವ್ಯವಸ್ಥೆಗಳಲ್ಲಿ ತುರ್ತು ದುರಸ್ತಿ, ಬದಲಾವಣೆ ಹಾಗೂ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆ ಕಾವೇರಿ ನೀರು ಸರಬರಾಜು ಯೋಜನೆಯ ಎಲ್ಲಾ ಹಂತಗಳ ಜಲರೇಚಕ ಯಂತ್ರಗಾರಗಳನ್ನು ಬುಧವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸ್ಥಗಿತಗೊಳಿಸಲಾಗುತ್ತದೆ ಎಂದು ಜಲಮಂಡಳಿ ತಿಳಿಸಿದೆ. ಈ ಸಂದರ್ಭದಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಮುಂಜಾಗ್ರತಾ ಕ್ರಮವಾಗಿ ದೈನಂದಿನ ಅಗತ್ಯಗಳಿಗೆ ಬೇಕಾಗುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಜಲಮಂಡಳಿಯು ಮನವಿ ಮಾಡಿದೆ.