ವಡ್ಡರಕೊಪ್ಪಲು ಶಿವರಾಮು

 ಕೆ ಆರ್ ನಗರ : ಚಂದಗಾಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿರನಹಳ್ಳಿ ಗ್ರಾಮ ವ್ಯಾಪ್ತಿಯ ರಸ್ತೆ ಪಕ್ಕದಲ್ಲಿ ತೆಗೆದ ಡ್ರೈನೇಜ್ ಗುಂಡಿ ಮುಚ್ಚದ ಕಾರಣ ಮುಂಜನಹಳ್ಳಿ ಗ್ರಾಮದ ಮಂಜುನಾಥ್ ಮತ್ತು ಮಮತಾ ಹೆಬ್ಬಾಳ ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಹೋಗುವ ವೇಳೆ ಅವರು ಚಲಿಸುತ್ತಿದ್ದ  ಸ್ಕೂಟರ್ ಹಳ್ಳಕ್ಕೆ ಬಿದ್ದ ಪರಿಣಾಮ  ಅದರ ಮೇಲಿದ್ದ ಮಂಜುನಾಥ್ ಮತ್ತು ಆತನ ಹೆಂಡತಿ ಕೂಡ ಬಿದ್ದಿದ್ದು, ಘಟನೆಯಲ್ಲಿ ಮಂಜುನಾಥ್‌ ಸ್ಥಳದಲ್ಲೇ ಮೃತಪಟ್ಟಿದ್ದು, ಆತನ ಹೆಂಡತಿ  ಪ್ರಾಣಾಯಪಾಯದಿಂದ ಪಾರಾದ ಘಟನೆ  ಕೆ ಆರ್ ನಗರ ತಾಲೂಕಿನ ಸಮೀಪ ಚೀರನಹಳ್ಳಿ ಗ್ರಾಮದ ಬಳಿ ನಡೆದಿದೆ. ಎರಡು ದಿನ ಕಳೆದರೂ ಮೃತ ಮಂಜುನಾಥನ  ಮೃತ ದೇಹದ ಹತ್ತಿರವಾಗಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಮಮತನ ಚಿಕಿತ್ಸೆ ಕೊಡಿಸದೆ ಕಂಡರೂ ಕಾಣದಂತೆ, ನೋಡಿದರೂ ನೋಡದಂತೆ ವರ್ತಿಸಿದ ಗ್ರಾಮ ಪಂಚಾಯಿತಿಯ ಅಭಿವೃದ್ಧಿಯ ಅಧಿಕಾರಿ ಮತ್ತು ಸಂಬಂಧಪಟ್ಟ ಇಂಜಿನಿಯರ್ ಹಾಗೂ  ವಾಟರ್ ಮ್ಯಾನ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಮುಂಭಾಗ ಮಾಜಿ ಸಚಿವ ಸಾ.ರಾ ಮಹೇಶ್ ಅವರ ನೇತೃತ್ವದಲ್ಲಿ ಮೃತ ಮಂಜುನಾಥನ ಪಾರ್ಥಿವ ಶರೀರವನ್ನಿಟ್ಟು ನೂರಾರು ಜನ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿಭಟನೆ ನಡೆಸಿದರು. ಇತ್ತೀಚೆಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು, ವಾಟರ್ ಮ್ಯಾನ್ ಮತ್ತು  ಗುತ್ತಿಗೆದಾರರು ಒಳ ಒಪ್ಪಂದ ಮಾಡಿಕೊಂಡು  ಕಳಪೆ ಕಾಮಗಾರಿ ಮಾಡುವ ಉದ್ದೇಶದಿಂದ ಗುಂಡಿ, ಹಳ್ಳ ಸೇರಿದಂತೆ ಇನ್ನಿತರ ಕಡೆ ಕಾಮಗಾರಿಯನ್ನು ಮಾಡುತ್ತಿರುವುದರಿಂದ ದನ, ಕರು, ಪ್ರಾಣಿಗಳು ಬಿದ್ದು ಸಾಯುತ್ತಿದ್ದವು ಆದರೆ ಇಂದು ಮನುಷ್ಯರೇ ಬಿದ್ದು ಪ್ರಾಣ ಕಳೆದುಕೊಂಡರು. ಮನುಷ್ಯನ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ ಆದ್ದರಿಂದ ಇಂಥ ಅವಘಡಕ್ಕೆ ಕಾರಣರಾದ ಅಧಿಕಾರಿಯನ್ನು ಕರ್ತವ್ಯದಿಂದ ಅಮಾನತು ಮಾಡಬೇಕು. ಮೃತ ಮಂಜುನಾಥ್ ಮತ್ತು ಅವನ ಪತ್ನಿ ಮಮತಾ ಅವರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ನಂತರ ಮಾತನಾಡಿದ ಮಾಜಿ ಸಚಿವ ಸಾ.ರಾ ಮಹೇಶ್, ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅದರಲ್ಲಿಯೂ ಪಟ್ಟಣದ ಆಸ್ಪತ್ರೆ ಸೇರಿದಂತೆ ಒಂದು ತಿಂಗಳಲ್ಲಿ ಮೂರು ಅವಘಡ ನಡೆದು ಒಂದು ತಾಯಿ ಮಗು ಇನ್ನೊಂದು ತಾಯಿ ಮತ್ತು ಈಗ ಮೃತ ಮಂಜುನಾಥ ಇನ್ನೊಂದು ಮಮತಾ ಸಾವು ಬದುಕಿನ  ನಡುವೆ ಹೋರಾಡುತ್ತಿದ್ದು  ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆ ಯಾರು ಹೊಣೆ? ಆಡಳಿತ ಯಂತ್ರ ಕುಸಿದಿದ್ದು ಅಧಿಕಾರಿಗಳು ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸದೇ ಇರುವುದು ಇದಕ್ಕೆಲ್ಲ ಕಾರಣ ಎಂದು ಆರೋಪಿಸಿದರು. ಮೃತ ಮಂಜುನಾಥನಿಗೆ 5 ಲಕ್ಷ ಪರಿಹಾರದ ಜೊತೆಗೆ  ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಮಮತಳಿಗೆ 5 ಲಕ್ಷ ಪರಿಹಾರ ನೀಡುವ ತನಕ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿ ವಿವಿಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ  ನಡೆಸಿದರು. ಪ್ರತಿಭಟನೆ ಉಗ್ರ ಸ್ವರೂಪ ತಾಳುವಂತೆ ಕಂಡಿದ್ದು ಗ್ರಾಮಾಂತರ ಪ್ರದೇಶದಿಂದ ಜೆಡಿಎಸ್ ಕಾರ್ಯಕರ್ತರು, ಮುಖಂಡರು ತಂಡೋಪ ತಂಡವಾಗಿ ಬರುತ್ತಿರುವುದನ್ನು ನೋಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

 ಕೊನೆಗೂ ಸಂಧಾನ ಯಶಸ್ವಿ 

ಮಾಜಿ ಸಚಿವ ಸಾ.ರಾ ಮಹೇಶ್ ಪಟ್ಟು ಬಿಡದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸುರೇಂದ್ರ ಮೂರ್ತಿ, ಇ.  ಓ ಕುಲದೀಪ್, ಸರ್ಕಲ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ನೇತೃತ್ವದಲ್ಲಿ  ಕೆ. ಆರ್. ನಗರ  ಅಭಿವೃದ್ಧಿ ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳ ಸಂಘದ ಪದಾಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರದಿಂದ ಮತ್ತು ಎಲ್ಲಾ ಅಭಿವೃದ್ಧಿ ಅಧಿಕಾರಿಗಳ ವತಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಮತಾಳಿಗೆ ಮತ್ತು ಮೃತ ಮಂಜುನಾಥನಿಗೆ ಪರಿಹಾರ ನೀಡುವ ಭರವಸೆ ನೀಡಿದ  ನಂತರ ಪ್ರತಿಭಟನೆ ಅಂತ್ಯವಾಯಿತು.   ಮೃತ ಮಂಜುನಾಥನ ಶವವನ್ನು ಅವರ ಕುಟುಂಬಸ್ಥರು ಮತ್ತು ಜೆಡಿಎಸ್ ಕಾರ್ಯಕರ್ತರು ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಶವ ಪರೀಕ್ಷೆಯ ನಂತರ ತಾಲೂಕು ಪಂಚಾಯಿತಿಯ ಮುಂಭಾಗ ಪ್ರತಿಭಟನೆ ನಡೆಸಿದರು.   ತಾಲೂಕು ಪಂಚಾಯತಿಯ ವತಿಯಿಂದ   ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಸಂಧಾನ ನಡೆಸಿದರೆ ಇಷ್ಟೊಂದು ದೊಡ್ಡಮಟ್ಟದ ಪ್ರತಿಭಟನೆ ನಡೆಯುತ್ತಿರಲಿಲ್ಲ ಎಂಬ ಮಾತು ಕೇಳಿ ಬಂತು.ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜೇಗೌಡ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ. ಟಿ. ಕುಮಾರ್,  ತಾಲೂಕು ಜೆಡಿಎಸ್ ಅಧ್ಯಕ್ಷ ಹಂಪಾಪುರ ಕುಮಾರ್, ಜಿಲ್ಲಾ ಮಹಿಳಾ ಜೆಡಿಎಸ್ ಅಧ್ಯಕ್ಷ ದಾಕ್ಷಾಯಿಣಿ, ತಾಲೂಕು ಮಹಿಳಾ ಜೆಡಿಎಸ್ ಅಧ್ಯಕ್ಷರಾದ ರಾಜಲಕ್ಷ್ಮಿ, ವಕೀಲ ಜೆಡಿಎಸ್ ಮುಖಂಡ ಅಂಕನಹಳ್ಳಿ ತಿಮ್ಮಪ್ಪ, ಜೆಡಿಎಸ್ ವಕ್ತಾರ ಕೆಎಲ್ ರಮೇಶ್, ನಗರ ಜೆಡಿಎಸ್ ಅಧ್ಯಕ್ಷ ಸಂತೋಷ್ ಗೌಡ, ಪ್ರಧಾನ ಕಾರ್ಯದರ್ಶಿ ರುದ್ರೇಶ್, ತಾಲೂಕ್ ಎಸ್ಸಿ ಎಸ್ಟಿ ಸಮಾಜದ ಅಧ್ಯಕ್ಷ  ಹಂಪಾಪುರ ಸುರೇಶ್, ಪುರಸಭಾ ಮಾಜಿ ಸದಸ್ಯರಾದ ಪ್ರಭು ಶಂಕರ್, ಕೆಎಲ್ ಜಗದೀಶ್, ಮುಖಂಡರುಗಳಾದ ಪುಟ್ಟರಾಜು, ಕೃಷ್ಣ ಶೆಟ್ಟಿ, ಅನಿಫ್ ಕುಮಾರ್, ವಕೀಲ ರಮೇಶ್, ಜೀವನ್, ಬಾಲಾಜಿ, ಸೂರಿ, ಚಿದಂಬರ, ಬಂಗಾರಿ, ಸೇರಿದಂತೆ ನೂರಾರು ಜನ ಕಾರ್ಯಕರ್ತರು ಮುಖಂಡರು ಹಾಜರಿದ್ದರು.