ಮೈಸೂರು : ಮಹನೀಯರ ಜಯಂತಿ ಮತ್ತು ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲ ಉದ್ದೇಶ ಅವರ ಆದರ್ಶ, ತ್ಯಾಗ ಮತ್ತು ನಡೆದು ಬಂದ ಹಾದಿ ಇಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂಬುದಾಗಿದೆ ಎಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ  ಶ್ರೀವತ್ಸ ಅವರು ಅಭಿಪ್ರಾಯಪಟ್ಟರು.ಇಂದು ಕರ್ನಾಟಕ ಕಲಾಮಂದಿರದಲ್ಲಿ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮೈಸೂರು ಮಹಾನಗರ ಪಾಲಿಕೆ, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ವೀರವನಿತೆ ಒನಕೆ ಓಬವ್ವ ಜಯಂತೋತ್ಸವ ಸಮಿತಿಯ ವತಿಯಿಂದ ಆಯೋಜಿಸಾಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ವೀರವನಿತೆ ಒನಕೆ ಓಬವ್ವ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಿತ್ತೂರು ರಾಣಿ ಚನ್ನಮ್ಮ ಮತ್ತು ವೀರ ವನಿತೆ ಒನಕೆ ಓಬವ್ವ ಅವರು ನಮ್ಮ ನಾಡಿನ ಹೆಮ್ಮೆಯ ನಾರಿಮಣಿಯರಾಗಿದ್ದು, ಇಂದಿನ ಮನುಕುಲಕ್ಕೆ ನಿರಂತರ ಪ್ರೇರಣೆಯಾಗಿದ್ದಾರೆ. ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಕೋಟೆಯ ರಕ್ಷಣೆಗೆ ಒನಕೆಯನ್ನೇ ಅಸ್ತ್ರವಾಗಿಸಿಕೊಂಡ ಒನಕೆ ಓಬವ್ವ ಅವರ ಧೈರ್ಯ, ದೇಶಪ್ರೇಮ ಮತ್ತು ಸಮಯಪ್ರಜ್ಞೆ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು ಎಂದು ಬಣ್ಣಿಸಿದರು.ಹಲವಾರು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ಪರಿಸರ ಸಂರಕ್ಷಣೆಯಲ್ಲಿ 'ಸಾಲುಮರದ ತಿಮ್ಮಕ್ಕ' ಅವರ ಸೇವೆ ಅನನ್ಯವಾದುದು; ಗಿಡ ನೆಟ್ಟು ಪೋಷಿಸುವ ಮೂಲಕ ಅವರು ತೋರಿದ ಪರಿಸರ ಕಾಳಜಿ ಮುಂದಿನ ತಲೆಮಾರಿಗೂ ಪಾಠವಾಗಿದೆ. ಇದರ ಜೊತೆಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನಮ್ಮದೇ ಮೈಸೂರಿನ ಹೆಣ್ಣುಮಕ್ಕಳು ಚಿನ್ನದ ಪದಕ ಗೆದ್ದಿರುವುದು ಜಿಲ್ಲೆಯ ಹಾಗೂ ನಾಡಿನ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದೆ ಎಂದರು. ದೇಶದ ರಾಷ್ಟ್ರಪತಿ, ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಸೇರಿದಂತೆ ಉನ್ನತ ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಹುದ್ದೆಗಳಲ್ಲಿ ಮಹಿಳೆಯರು ಸಮರ್ಥವಾಗಿ ಕಾರ್ಯನಿರ್ವಹಿಸಿ, ದೇಶವನ್ನು ಮುನ್ನಡೆಸಿರುವುದನ್ನು ನಾವು ಕಾಣಬಹುದು. ಐತಿಹಾಸಿಕ ವೀರವನಿತೆಯರು ಹಾಗೂ ಸಮಕಾಲೀನ ಸಾಧಕಿಯರ ಜೀವನಗಾಥೆಗಳನ್ನು ಇಂದಿನ ಯುವಜನತೆ ಅಧ್ಯಯನ ಮಾಡಿ, ಸಮಾಜದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಮಹಿಳೆಯರ ಗೌರವ, ಸುರಕ್ಷತೆ ಮತ್ತು ಸಬಲೀಕರಣಕ್ಕೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.ಅಪರ ಜಿಲ್ಲಾಧಿಕಾರಿಗಳಾದ ಆರ್.ಐಶ್ವರ್ಯ   ಮಾತನಾಡಿ ಭಾರತೀಯ ಸ್ವಾತಂತ್ರ್ಯ ಇತಿಹಾಸದಲ್ಲಿ ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮ, ಒನಕೆ ಓಬವ್ವ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಅಂತಹ ವೀರ ಮಹಿಳೆಯರು ಅದ್ಭುತ ಚರಿತ್ರೆಯನ್ನು ಸೃಷ್ಟಿಸಿದ್ದಾರೆ. ಇಂತಹ ಮಹಾನ್ ಸಾಧಕಿಯರು ನಮ್ಮ ಭವ್ಯ ಕನ್ನಡ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು  ಅಭಿಪ್ರಾಯಪಟ್ಟರು.ಒಂದೆಡೆ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಲು ಒನಕೆ ಓಬವ್ವ ರಣಚಂಡಿಯ ಅವತಾರವನ್ನೇ ತಾಳಿದರೆ, ಮತ್ತೊಂದೆಡೆ ಕಿತ್ತೂರು ರಾಣಿ ಚೆನ್ನಮ್ಮ ಅವರು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಧೀಮಂತ ಮಹಿಳೆ ಎಂದು ಬಣ್ಣಿಸಿದರು.ಇಂದಿನ ಪೀಳಿಗೆಗೆ ಈ ವೀರ ವನಿತೆಯರ ಇತಿಹಾಸವನ್ನು ಪರಿಚಯಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ ಅವರು ಮನೆಯ ಪ್ರತಿಯೊಬ್ಬ ಹೆಣ್ಣುಮಕ್ಕಳಲ್ಲೂ ಇಂತಹದ್ದೇ ಧೈರ್ಯ ಮತ್ತು ಸ್ಥೈರ್ಯ ಮೂಡುವಂತೆ ಪೋಷಕರು ಬೆಳೆಸಬೇಕು. ವೀರ ಮಹಿಳೆಯರ ಆದರ್ಶಗಳನ್ನು ಮಕ್ಕಳಿಗೆ ಹೇಳಿಕೊಡುವ ಮೂಲಕ ಅವರನ್ನು ಸಬಲರನ್ನಾಗಿ ಮಾಡಬೇಕು. ಇದರೊಂದಿಗೆ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅತಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.ಇಂದಿಗೂ ಶಾಲಾ-ಕಾಲೇಜುಗಳ ವೇಷಭೂಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಿತ್ತೂರು ಚೆನ್ನಮ್ಮನಂತಹ ವೀರರ ಧ್ವನಿ ಮತ್ತು ಕೆಚ್ಚು ಜೀವಂತವಾಗಿರುವುದು ಹೆಮ್ಮೆಯ ಸಂಗತಿ. ಎಲ್ಲಿಯವರೆಗೂ ಈ ಭೂಮಂಡಲ ಇರುತ್ತದೆಯೋ ಅಲ್ಲಿಯವರೆಗೂ ಇಂತಹ ವೀರ ಮಹಿಳೆಯರ ತ್ಯಾಗ ಮತ್ತು ಸಾಧನೆ ಚಿರಸ್ಮರಣೀಯವಾಗಿರುತ್ತದೆಎಂದು ಅವರು ಹೇಳಿದರು.ಕೆ.ಆರ್ ನಗರ ಲಾಳನಹಳ್ಳಿಯ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಶರಣೆ ಜಯದೇವಿ ತಾಯಿ ಅವರು ಮಾತನಾಡಿ ಮಹಿಳಾ ಜನತೆಗೆ ಒನಕೆ ಓಬವ್ವ ಅವರು ಮಾದರಿ ಮತ್ತು ಆದರ್ಶಪ್ರಾಯ ಮಹಿಳೆಯಾಗಿದ್ದಾರೆ. ಮಹಾ ಪರಾಕ್ರಮಿಯಾಗಿ ಚಿತ್ರದುರ್ಗ ಕೋಟೆಗೆ ಎದುರಾದ ಆಪತ್ತನ್ನು ತಪ್ಪಿಸಿ ಶತ್ರುಗಳ ವಿರುದ್ಧ ವೀರತ್ವದಿಂದ ಹೋರಾಡಿದ ಅವರ ಉದಾತ್ತ ಮತ್ತು ಮಹತ್ತರ ವ್ಯಕ್ತಿತ್ವವನ್ನು ನಾವೆಲ್ಲರೂ ಇಂದು ಸ್ಮರಿಸಬೇಕಾದ ಅಗತ್ಯವಿದೆ ಎಂದರು.ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅಚ್ಚಳಿಯದ ಹೆಸರನ್ನು ಮೂಡಿಸಿದ ಕಿತ್ತೂರು ರಾಣಿ ಚೆನ್ನಮ್ಮ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಹಲವು ದಶಕಗಳ ಮೊದಲೇ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಸಿಡಿದೆದ್ದ ಧೀರ ಮಹಿಳೆ. ರಾಣಿ ಚೆನ್ನಮ್ಮ ಹಾಗೂ ವೀರವನಿತೆ ಒನಕೆ ಓಬವ್ವ ಅವರ ಬದುಕು ಕೇವಲ ಒಂದು ಯುದ್ಧದ ಕಥೆಯಲ್ಲ ಅದು ಸ್ವಾಭಿಮಾನ, ನಾಯಕತ್ವ ಮತ್ತು ಮಹಿಳಾ ಶಕ್ತಿಯ ಪ್ರತೀಕ. ಕಷ್ಟಕಾಲದಲ್ಲೂ ಎದೆಗುಂದದೆ ಹೋರಾಡುವ ಮನೋಭಾವವನ್ನು ಅವರ ಜೀವನ ನಮಗೆ ಕಲಿಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ  ನಾ.ನಾಗಚಂದ್ರ, ಮಹಾಜನ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ವಿನೋದಮ್ಮ, ಶರಣ ಸಾಹಿತ್ಯ ಮತ್ತು ಬಸವ ಬಳಗ ಒಕ್ಕೂಟದ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ವೀರವನಿತೆ ಒನಕೆ ಓಬವ್ವ ಜಯಂತೋತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.