ಚೆನ್ನೈ: ತಮಿಳುನಾಡಿನಲ್ಲಿ TVK ಸರ್ಕಾರ ರಚಿಸಲಿದೆ ಎಂದು ಪಕ್ಷದ ನಾಯಕ ಫೆಲಿಕ್ಸ್ ಜೆರಾಲ್ಡ್ ಹೇಳಿದ್ದಾರೆ. ಬೆಳಗ್ಗೆ 11:15ರ ವೇಳೆಗೆ TVK 105 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಆಡಳಿತಾರೂಢ DMK 50 ಮತ್ತು ಎಐಎಡಿಎಂಕೆ ಮೈತ್ರಿಕೂಟ 77 ಸ್ಥಾನಗಳಲ್ಲಿ ಮುನ್ನಡೆಯಲ್ಲಿತ್ತು. ಇತರರು 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು.
ಇನ್ನು TVK ನಾಯಕ ವಿಜಯ್ ಅವರ ಪಣಯೂರ್ ನಿವಾಸದ ಬಳಿ ಹೆಚ್ಚಿನ ಅಭಿಮಾನಿಗಳು ಸೇರುವ ನಿರೀಕ್ಷೆಯಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಯಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಲ್ಲದೆ ನಿವಾಸದ ಹೊರಗೆ ಜಮಾಯಿಸಿದ ಅಭಿಮಾನಿಗಳು ವಿಜಯ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಪಣಯೂರ್ ನಿವಾಸದ ಹೊರಗೆ ಜಮಾಯಿಸಿರುವ ಅಭಿಮಾನಿಗಳಲ್ಲಿ ಒಬ್ಬರು ಮಾಧ್ಯಮಗಳ ಜೊತೆ ಮಾತನಾಡಿದ್ದು, ನಾನು ವಿಜಯ್ ಅವರ ದೊಡ್ಡ ಅಭಿಮಾನಿ. ನಾವು ಅವರನ್ನು ಬೆಂಬಲಿಸಲು ಇಲ್ಲಿಗೆ ಬಂದಿದ್ದೇವೆ. ಟಿವಿಕೆ ಈಗ ಮುನ್ನಡೆಯಲ್ಲಿದೆ. ನಮಗೆ ವಿಜಯ್ ಬಗ್ಗೆ ತುಂಬಾ ಹೆಮ್ಮೆ ಇದೆ. ಎಲ್ಲರೂ ಬದಲಾವಣೆಯನ್ನು ಬಯಸುತ್ತಿದ್ದಾರೆ. ವಿಜಯ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
234 ವಿಧಾನಸಭಾ ಕ್ಷೇತ್ರಗಳಿಗಾಗಿ ಏಪ್ರಿಲ್ 23ರಂದು ಮತದಾನ ನಡೆದಿದ್ದು, ಒಟ್ಟು 84.69% ಮತದಾನ ದಾಖಲಾಗಿತ್ತು. ಬಹುಮತಕ್ಕೆ 118 ಸ್ಥಾನಗಳು ಅಗತ್ಯ. ಈ ಚುನಾವಣೆಯಲ್ಲಿ DMK ಮೈತ್ರಿಕೂಟ, AIADMK ಮೈತ್ರಿಕೂಟ, ವಿಜಯ್ ನೇತೃತ್ವದ TVK ಹಾಗೂ NTK ಪಕ್ಷಗಳು ಪೈಪೋಟಿ ನಡೆಸಿವೆ.
ಕಳೆದ ಚುನಾವಣೆಯಲ್ಲಿ DMK ಮೈತ್ರಿಕೂಟ 159 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿದರೆ, AIADMK ಮೈತ್ರಿಕೂಟ 75 ಸ್ಥಾನಗಳಲ್ಲಿ ಜಯಗಳಿಸಿತ್ತು.



