ಮೈಸೂರು: ಕೇಂದ್ರ ಸರ್ಕಾರದ ಲೈಂಗಿಕ ಅಲ್ಪಸಂಖ್ಯಾತ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆ ಈ ಸಮುದಾಯದವರ ಹಕ್ಕುಗಳಿಗೆ ಗಂಭೀರ ಹಾನಿಯುಂಟು ಮಾಡುವ ಕಾರಣ ಅದನ್ನು ವಿರೋಧಿಸಲಾಗುವುದು ಎಂದು ರಾಜ್ಯ ಮಟ್ಟದ ಸಮುದಾಯದ ಸಂಘಟನೆಗಳ ಒಕ್ಕೂಟದ ಪದಾಧಿಕಾರಿ ಪೃಥ್ವಿ ಸ್ಪಷ್ಟ ಪಡಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಈ ಮಸೂದೆ ಈಗಾಗಲೇ ಇರುವ ಸಮಾನತೆ, ಗೌರವ ಮತ್ತು ಸ್ವಯಂ ಗುರುತಿನ ಹಕ್ಕುಗಳನ್ನು ದುರ್ಬಲಗೊಳಿಸುವ ಯತ್ನವಾಗಿದೆ. ಲಿಂಗ ಗುರುತಿಗೆ ವೈದ್ಯಕೀಯ ಪರಿಶೀಲನೆ ಮತ್ತು ಪ್ರಮಾಣಪತ್ರಗಳ ಮೂಲಕ ಮಾತ್ರ ಮಾನ್ಯಗೊಳಿಸುವ ವ್ಯವಸ್ಥೆ ಬೇಕೆಂದು ತಿಳಿಸಿದೆ. ಆದರೆ ಈ ಹಿಂದಿನ ಸುಪ್ರೀಂಕೋರ್ಟ್ ತೀರ್ಪಿನ ಅಡಿಯಲ್ಲಿನ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಲಿಂಗ ಗುರುತನ್ನು ಸ್ವಯಂ ನಿರ್ಧರಿಸುವ ಹಕ್ಕು ಇದೆ, ಯಾವುದೇ ವೈದ್ಯಕೀಯ ಅಥವಾ ಆಡಳಿತಾತ್ಮಕ ಅನುಮತಿ ಅಗತ್ಯವಿಲ್ಲ ಎಂಬ ಅಂಶಕ್ಕೆ ವಿರುದ್ಧವಾದುದಾಗಿದೆ ಎಂದು ತಿಳಿಸಿದರು.
ಅಲ್ಲದೆ, ಮಸೂದೆಯಲ್ಲಿ ಟ್ರಾನ್ಸ್ಜೆಂಡರ್ ಎಂಬ ಪದಕ್ಕೆ ಸೀಮಿತ ಮತ್ತು ತಪ್ಪಾದ ವ್ಯಾಖ್ಯಾನ ನೀಡಲಾಗಿದೆ. ಹಲವಾರು ಲಿಂಗ ವೈವಿಧ್ಯತೆಯ ಗುರುತುಗಳನ್ನು ಹೊರತು ಪಡಿಸಲಾಗಿದೆ. ಇದೇ ರೀತಿಯ ಹಲವಾರು ಲೋಪಗಳಿರುವ ಕಾರಣ ಮಸೂದೆಯನ್ನು ವಿರೋಧಿಸುವುದಾಗಿ ವಿವರಿಸಿದರು.
ಟಿ. ಶಿವರಾಮು, ಬಿ.ಎಚ್. ಮಂಜುನಾಥ್ ಮೊದಲಾದವರು ಇದ್ದರು.



