ನವದೆಹಲಿ : ಕೇಂದ್ರ ಸರ್ಕಾರ ಎತ್ತಿರುವ ಆತಂಕಗಳು ಮತ್ತು ಸುರಕ್ಷತೆಯ ಪ್ರಶ್ನೆಗಳ ನಡುವೆಯೇ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಸರ್ಕಾರದ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಹಲವು ಹಂತದ ಸುರಕ್ಷತಾ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಕಂಪನಿ ಹೇಳಿದೆ. ನಕಲಿ ಖಾತೆ ಸೃಷ್ಟಿ, ಗುರುತು ವಂಚನೆ (Identity Theft) ಮತ್ತು ಆನ್‌ಲೈನ್ ವಂಚನೆಗಳನ್ನು ತಡೆಯಲು ಈ ಹೊಸ ಫೀಚರ್‌ನಲ್ಲಿ ಹಲವು ಸುರಕ್ಷತಾ ಕ್ರಮಗಳನ್ನು ಒಳಗೊಳ್ಳಲಾಗಿದೆ ಎಂದು ವಾಟ್ಸಾಪ್ ದೃಢಪಡಿಸಿದೆ.
ಹೈ ಪ್ರೊಫೈಲ್ ಹೆಸರುಗಳು ಮುಂಚಿತವಾಗಿಯೇ ಸುರಕ್ಷಿತ (ರಿಸರ್ವ್)
ವರದಿಗಳ ಪ್ರಕಾರ ವಾಟ್ಸಾಪ್ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದು, ಸಾರ್ವಜನಿಕ ವ್ಯಕ್ತಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಪ್ರಸಿದ್ಧ ವ್ಯಕ್ತಿಗಳ ಹೆಸರುಗಳನ್ನು ಸದ್ಯಕ್ಕೆ ರಿಸರ್ವ್ ಮಾಡಲಾಗಿದ್ದು, ಸುರಕ್ಷಿತವಾಗಿಡಲಾಗಿದೆ. ಇದರಿಂದಾಗಿ ಆಯಾ ನಿಜವಾದ ಮಾಲೀಕರು ಮಾತ್ರ ಆ ಹೆಸರುಗಳನ್ನು ಬಳಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ, ಈ ಹೆಸರುಗಳಿಗೆ ಹೋಲುವ ಇತರ ಯೂಸರ್‌ನೇಮ್‌ಗಳನ್ನು ಸಹ ಬ್ಲಾಕ್ ಮಾಡಿ ಇಡಲಾಗಿದ್ದು, ಯಾರೂ ನಕಲಿ ಅಕೌಂಟ್ ಕ್ರಿಯೇಟ್ ಮಾಡಿ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ಕಂಪನಿ ತಿಳಿಸಿದೆ.
ಫೋನ್ ನಂಬರ್ ಮರೆಮಾಚಿ ಚಾಟ್ ಮಾಡುವ ಅವಕಾಶ
ಹೊಸ ಯೂಸರ್‌ನೇಮ್ ಫೀಚರ್ ಮೂಲಕ ಬಳಕೆದಾರರು ತಮ್ಮ ಮೊಬೈಲ್ ನಂಬರ್ ಹಂಚಿಕೊಳ್ಳದೆಯೇ ಪರಸ್ಪರ ಸಂಪರ್ಕ ಸಾಧಿಸಬಹುದು. ಇದು ಬಳಕೆದಾರರ ಗೌಪ್ಯತೆಯನ್ನು (Privacy) ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ. ಆದರೆ, ವಾಟ್ಸಾಪ್ ಬಳಸಲು ಮೊಬೈಲ್ ನಂಬರ್ ಮೊದಲಿನಂತೆಯೇ ಅತ್ಯಗತ್ಯವಾಗಿರುತ್ತದೆ ಮತ್ತು ಯೂಸರ್‌ನೇಮ್ ಕೇವಲ ಚಾಟಿಂಗ್ ಆರಂಭಿಸಲು ಇರುವ ಒಂದು ಪರ್ಯಾಯ ಆಯ್ಕೆಯಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಈ ಫೀಚರ್ ಅನ್ನು ಒಮ್ಮೆಗೆ ಎಲ್ಲರಿಗೂ ಲಾಂಚ್ ಮಾಡುತ್ತಿಲ್ಲ. ಹಂತಹಂತವಾಗಿ ಜಾರಿಗೆ ತರಲಾಗುತ್ತಿದ್ದು, ಸದ್ಯಕ್ಕೆ ಕೆಲವು ಬಳಕೆದಾರರಿಗೆ ಮಾತ್ರ ತಮಗೆ ಇಷ್ಟವಾದ ಯೂಸರ್‌ನೇಮ್ ಆಯ್ಕೆ ಮಾಡಲು ತಿಳಿಸಲಾಗಿದೆ.
ವಂಚನೆ ತಡೆಯಲು ತಾಂತ್ರಿಕ ಕಾವಲು
ಯೂಸರ್‌ನೇಮ್ ದುರ್ಬಳಕೆ ತಡೆಯಲು ಸಿಸ್ಟಂನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂದು ವಾಟ್ಸಾಪ್ ಹೇಳಿದೆ.
ಯಾವುದೇ ಹೊಸ ಅಕೌಂಟ್‌ಗೆ ಆರಂಭದಲ್ಲಿ ಸೀಮಿತ ಸಂಖ್ಯೆಯ ಜನರನ್ನು ಮಾತ್ರ ಸಂಪರ್ಕಿಸಲು ಅವಕಾಶವಿರುತ್ತದೆ. ಯಾರದ್ದೋ ಯೂಸರ್‌ನೇಮ್ ಅನ್ನು ಸುಮ್ಮನೆ ಊಹಿಸಿ ಹುಡುಕುವ ಅಥವಾ ಸತತವಾಗಿ ಟ್ರೈ ಮಾಡುವ ಪ್ರಯತ್ನಗಳನ್ನು ಸಿಸ್ಟಂ ತಾನಾಗಿಯೇ ಬ್ಲಾಕ್ ಮಾಡುತ್ತದೆ.
ಅಪರಿಚಿತ ಯೂಸರ್‌ನೇಮ್‌ನಿಂದ ಸಂದೇಶ ಬಂದಾಗ, ಅದು ಹೊಸ ಅಕೌಂಟ್ ಆಗಿದೆಯೇ? ಹಳೆಯ ಸಂಪರ್ಕವೇ? ಇಬ್ಬರ ನಡುವೆ ಯಾವುದೇ ಕಾಮನ್ ಗ್ರೂಪ್‌ಗಳಿವೆಯೇ? ಮತ್ತು ಅದು ಯಾವ ದೇಶದ ನಂಬರ್? ಎಂಬ ಸಂಪೂರ್ಣ ವಿವರ ಕಾಣಿಸಿಕೊಳ್ಳುತ್ತದೆ. ಇದರಿಂದ ಎದುರಿಗಿರುವ ವ್ಯಕ್ತಿ ನಂಬಿಕಸ್ಥನೇ ಅಲ್ಲವೇ ಎಂಬುದನ್ನು ಬಳಕೆದಾರರು ಸುಲಭವಾಗಿ ನಿರ್ಧರಿಸಬಹುದು.
3 ದಿನಗಳಲ್ಲಿ ಜವಾಬು ನೀಡಲು ಕೇಂದ್ರದ ಸೂಚನೆ
ಇದಕ್ಕೂ ಮುನ್ನ, ಕೇಂದ್ರ ಸರ್ಕಾರವು ವಾಟ್ಸಾಪ್‌ಗೆ ನೋಟಿಸ್ ಜಾರಿ ಮಾಡಿದ್ದು, ಈ ಯೂಸರ್‌ನೇಮ್ ಫೀಚರ್ ಕುರಿತು ಮೂರು ದಿನಗಳ ಒಳಗಾಗಿ ಸವಿಸ್ತಾರವಾದ ವರದಿ ನೀಡುವಂತೆ ಸೂಚಿಸಿದೆ. ಈ ವಿಷಯದ ಕುರಿತು ಸಂಪೂರ್ಣ ಚರ್ಚೆ ಮತ್ತು ಪರಿಶೀಲನೆ ನಡೆಯುವವರೆಗೆ ಭಾರತದಲ್ಲಿ ಈ ಫೀಚರ್ ಅನ್ನು ಜಾರಿಗೆ ತರುವಂತಿಲ್ಲ ಎಂದು ಸರ್ಕಾರ ಖಡಕ್ ಆಗಿ ಹೇಳಿದೆ.
ಸೈಬರ್ ವಂಚನೆ ಹೆಚ್ಚುವ ಆತಂಕದಲ್ಲಿ ಸರ್ಕಾರ
ಸರ್ಕಾರಿ ಇಲಾಖೆಗಳು, ಬ್ಯಾಂಕ್‌ಗಳು ಮತ್ತು ಇತರ ವಿಶ್ವಾಸಾರ್ಹ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಯೂಸರ್‌ನೇಮ್ ಸೃಷ್ಟಿಸಿ ಜನರಿಗೆ ವಂಚಿಸುವ ಸಾಧ್ಯತೆಗಳಿವೆಯೇ ಎಂಬ ಬಗ್ಗೆ ಸರ್ಕಾರ ತನಿಖೆ ನಡೆಸುತ್ತಿದೆ. ಆನ್‌ಲೈನ್ ಫ್ರಾಡ್, ಫಿಶಿಂಗ್ ಮತ್ತು ‘ಡಿಜಿಟಲ್ ಅರೆಸ್ಟ್’ ನಂತಹ ಸೈಬರ್ ಅಪರಾಧಗಳಿಗೆ ಇದು ದಾರಿ ಮಾಡಿಕೊಡಬಹುದು ಎಂಬುದು ಸರ್ಕಾರದ ಆತಂಕವಾಗಿದೆ.
ಮೆಟಾ ಕಂಪನಿ ನೀಡುವ ಉತ್ತರದ ಆಧಾರದ ಮೇಲೆ ಮತ್ತು ಸುರಕ್ಷತೆಯ ಎಲ್ಲಾ ಆಯಾಮಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಭಾರತದಲ್ಲಿ ವಾಟ್ಸಾಪ್ ಯೂಸರ್‌ನೇಮ್ ಫೀಚರ್ ಲಾಂಚ್ ಮಾಡಲು ಅನುಮತಿ ನೀಡಬೇಕೇ ಬೇಡವೇ ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸಲಿದೆ. (ಏಜೆನ್ಸಿಸ್)



