ಬೆಂಗಳೂರು : ಕ್ಷಯ ರೋಗವು ಸಾಂಕ್ರಾಮಿಕ ರೋಗವಾಗಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದರೆ ಪ್ರಾಣಾಪಾಯದಿಂದ ಪಾರಾಗಬಹುದಾಗಿದ್ದು, ರೋಗಿಗಳಲ್ಲಿ ಭಯ, ಹಿಂಜರಿಕೆ ಬೇಡ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ಈ ಬಗ್ಗೆ ಮಾಧ್ಯಮ ಪ್ರಕಟನೆ ನೀಡಿರುವ ಅವರು, 2024ರಲ್ಲಿ ರಾಜ್ಯದಲ್ಲಿ ಶೇ.88ರಷ್ಟು ಕ್ಷಯರೋಗಿಗಳು ಗುಣಮುಖರಾಗಿದ್ದಾರೆ. 2025ರಲ್ಲಿ 318 ಪ್ರಕರಣಗಳು ಪತ್ತೆಯಾಗಿದ್ದು, ಗುಣಮುಖರಾಗಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಆಶಾದಾಯಕ ಸಂಗತಿ ಎಂದಿದ್ದಾರೆ.
ರಾಯಚೂರು, ಧಾರವಾಡ, ಬಳ್ಳಾರಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳು ರಾಜ್ಯದ ಒಟ್ಟು ರೋಗಿಗಲ್ಲಿ ಶೇ.20ರಷ್ಟು ಹೊಂದಿದೆ. ಬಹಳ ಕಾಲದಿಂದ ಮನುಕುಲವನ್ನು ಬಾಧಿಸುತ್ತಿರುವ ಕ್ಷಯರೋಗದಿಂದ ಮುಕ್ತಿ ನೀಡಬೇಕೆಂಬುದು ಸರಕಾರದ ಆಶಯ. ಗೃಹ ಆರೊಗ್ಯ ಯೊಜನೆಯಲ್ಲಿಯೂ ಆರೋಗ್ಯ ಕಾರ್ಯಕರ್ತರು ಮನೆಮನೆ ಭೇಟಿ ನೀಡಿದಾಗ ಕ್ಷಯರೋಗ ಲಕ್ಷಣಗಳ ಕುರಿತು ಮಾಹಿತಿ ಪಡೆಯುತ್ತಾರೆ. ಪಂಚಾಯತಿ ಮಟ್ಟದಲ್ಲಿಯೇ ಜನರಿಗೆ ಸಮಗ್ರ ಅರಿವು ಮೂಡಿಸುವ ಕಾರ್ಯವನ್ನು ಇಲಾಖೆ ಮಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರೋಗ ನಿರೊಧಕ ಶಕ್ತಿ ಕುಂದುವುದು, ಪೌಷ್ಠಿಕ ಆಹಾರದ ಕೊರತೆಯಿಂದ ಈ ರೋಗ ಉಲ್ಬಣಗೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತದೆ. ಜ್ವರ, ಕೆಮ್ಮು, ರಾತ್ರಿ ಬೆವರುವುದು, ಕಫದಲ್ಲಿ ರಕ್ತ ಬರುವುದು, ಬಳಲಿಕೆ ಈ ರೀತಿಯ ಲಕ್ಷಣ ಇದ್ದಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಅನುಮಾನ ಬಂದ ತಕ್ಷಣ ಸರಕಾರಿ ಆಸ್ಪತ್ರೆ ಸಂಪರ್ಕಿಸಿ ಔಷಧ ಪಡೆಯುವಲ್ಲಿ ಹಿಂಜರಿಕೆ ಇರಬಾರದು ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ರಾಜ್ಯ ಕ್ಷಯರೋಗ ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ-1
ಜಿಲ್ಲಾ ಕ್ಷಯರೋಗ ಕೇಂದ್ರ-32
ಕ್ಷಯರೋಗ ಘಟಕಗಳು -284
ನಿರ್ದಿಷ್ಟ ಸೂಕ್ಷ್ಯದರ್ಶಕ ಕೇಂದ್ರ -1893
ಪರೀಕ್ಷಾ ಲ್ಯಾಬ್‍ಗಳು- 166



