ಬೆಳಗ್ಗೆ ಎದ್ದ ತಕ್ಷಣ ಬಿಸಿಬಿಸಿಯಾದ ಒಂದು ಕಪ್ ಕಾಫಿ ಸಿಗದಿದ್ದರೆ ಹೆಚ್ಚಿನವರಿಗೆ ದಿನವೇ ಕಳೆಯುವುದಿಲ್ಲ. ಕಚೇರಿಯ ಕೆಲಸದ ಒತ್ತಡವಿರಲಿ, ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿರಲಿ ಎಲ್ಲೇ ಇದ್ದರೂ ಈ ಕಾಫಿ ಬೇಕೇ ಬೇಕು. ಆದರೆ ಈ ಕಾಫಿ ಕುಡಿಯುವುದರಿಂದ ನಮ್ಮ ದೇಹದಲ್ಲಾಗುವ ಬದಲಾವಣೆಮತ್ತು ನಷ್ಟದ ಬಗ್ಗೆ ನಿಮಗೆಷ್ಟು ಗೊತ್ತು..?
ಕಾಫಿಯಲ್ಲಿರುವ ಪ್ರಮುಖ ಅಂಶವೆಂದರೆ ‘ಕೆಫೀನ್’ ಇದು ನಮ್ಮ ಮೆದುಳಿನಲ್ಲಿ ಆಯಾಸವನ್ನು ಉಂಟುಮಾಡುವ ‘ಅಡೆನೊಸಿನ್’ ಎಂಬ ರಾಸಾಯನಿಕವನ್ನು ತಡೆಯುತ್ತದೆ. ಇದರಿಂದಾಗಿ ಕಾಫಿ ಕುಡಿದ ತಕ್ಷಣ ನಮಗೆ ತ್ವರಿತವಾಗಿ ಶಕ್ತಿ ದೊರೆಯುತ್ತದೆ. ಏಕಾಗ್ರತೆ ಹೆಚ್ಚುವುದು, ಮನಸ್ಥಿತಿ (Mood) ಸುಧಾರಿಸುವುದು ಮತ್ತು ಕೆಲಸದಲ್ಲಿ ಚುರುಕುತನ ಬರುವುದು ಹೀಗಾಗಿ ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳು ರಾತ್ರಿ ವೇಳೆ ಎಚ್ಚರವಾಗಿರಲು ಕಾಫಿಯನ್ನು ಹೆಚ್ಚಾಗಿ ಅವಲಂಬಿಸುತ್ತಾರೆ.
ಕಾಫಿಯಲ್ಲಿ ಸಮೃದ್ಧವಾಗಿರುವ ಆಂಟಿಆಕ್ಸಿಡೆಂಟ್‌ಗಳು ನಮ್ಮ ದೇಹದ ಜೀವಕೋಶಗಳನ್ನು ರಕ್ಷಿಸುತ್ತವೆ. ಹಲವು ಸಂಶೋಧನೆಗಳ ಪ್ರಕಾರ, ನಿಯಮಿತವಾಗಿ ಕಾಫಿ ಕುಡಿಯುವವರಲ್ಲಿ ಈ ಕೆಳಗಿನ ಪ್ರಯೋಜನಗಳು ಕಂಡುಬರುತ್ತವೆ:
ಕಾಫಿಯನ್ನು ನಿಯಮಿತವಾಗಿ (ಮಿತವಾಗಿ) ಕುಡಿಯುವುದರಿಂದ ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸುತ್ತದೆ ಮತ್ತು ಮಧುಮೇಹ ಬರುವ ಅಪಾಯ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ. ಫ್ಯಾಟಿ ಲಿವರ್ ಮತ್ತು ಲಿವರ್ ಸಿರೋಸಿಸ್ ನಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕಾಫಿ ಉತ್ತಮವಾಗಿದೆ. ಯಕೃತ್ತಿನ ಕಾಯಿಲೆಗಳ ತೀವ್ರತೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸುತ್ತವೆ. ಜೊತೆಗೆ ಆಲ್ಝೈಮರ್ಸ್ ಮತ್ತು ಪಾರ್ಕಿನ್ಸನ್ಸ್ ನಂತಹ ವೃದ್ಧಾಪ್ಯದ ಮೆದುಳು ಸಂಬಂಧಿತ ಕಾಯಿಲೆಗಳು ಬರದಂತೆ ಕಾಫಿ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತದೆ.
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ನಿಮ್ಮ ಆಹಾರ ಕ್ರಮದಲ್ಲಿ ‘ಬ್ಲಾಕ್ ಕಾಫಿ’ ಸೇರಿಸಿಕೊಳ್ಳುವುದು ಉತ್ತಮ. ಇದು ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ಶೇಕಡಾ 3 ರಿಂದ 11 ರಷ್ಟು ಹೆಚ್ಚಿಸುತ್ತದೆ. ಇದರಿಂದಾಗಿ ಕೊಬ್ಬು ವೇಗವಾಗಿ ಕರಗುತ್ತದೆ. ಅಲ್ಲದೆ, ವ್ಯಾಯಾಮ ಮಾಡುವ 30 ನಿಮಿಷಗಳ ಮೊದಲು ಕಾಫಿ ಕುಡಿದರೆ ದೇಹದಲ್ಲಿ ಅಡ್ರಿನಾಲಿನ್ ಮಟ್ಟ ಹೆಚ್ಚಾಗಿ, ಹೆಚ್ಚು ವರ್ಕ್‌ಔಟ್ ಮತ್ತು ವ್ಯಾಯಾಮ ಮಾಡುವ ಸಾಮರ್ಥ್ಯ ಸುಧಾರಿಸುತ್ತದೆ.
ಕಾಫಿ ಕೇವಲ ಆಂತರಿಕ ಆರೋಗ್ಯಕ್ಕೆ ಮಾತ್ರವಲ್ಲದೆ, ಬಾಹ್ಯ ಸೌಂದರ್ಯಕ್ಕೂ ಪ್ರಯೋಜನಕಾರಿ ಯಾಗಿದೆ. ಕಾಫಿ ಪುಡಿಯನ್ನು ಸ್ಕ್ರಬ್ ಆಗಿ ಬಳಸುವುದರಿಂದ ಚರ್ಮದ ಮೇಲಿರುವ ಸತ್ತ ಜೀವಕೋಶಗಳು (Dead cells) ನಿವಾರಣೆಯಾಗಿ ಚರ್ಮವು ಕಾಂತಿಯುತವಾಗುತ್ತದೆ. ಕೂದಲಿನ ಬುಡವನ್ನು ಗಟ್ಟಿಗೊಳಿಸಿ, ಕೂದಲು ಚೆನ್ನಾಗಿ ಬೆಳೆಯಲು ಕಾಫಿಯಲ್ಲಿರುವ ಪೋಷಕಾಂಶಗಳು ಸಹಾಯ ಮಾಡುತ್ತವೆ.
ಯಾವುದೇ ವಸ್ತುವಾದರೂ ಅತಿಯಾದರೆ ಅಮೃತವೂ ವಿಷವಾಗುತ್ತದೆ. ಕಾಫಿ ವಿಷಯದಲ್ಲೂ ಇದೇ ಸೂತ್ರ ಅನ್ವಯಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಒಬ್ಬ ಆರೋಗ್ಯವಂತ ವ್ಯಕ್ತಿ ದಿನಕ್ಕೆ 2 ರಿಂದ 3 ಕಪ್ (ಸುಮಾರು 400 ಮಿ.ಗ್ರಾಂ ಕೆಫೀನ್) ಕಾಫಿ ಕುಡಿಯುವುದು ಸುರಕ್ಷಿತವಾಗಿದೆ. ಅದಕ್ಕಿಂತ ಹೆಚ್ಚು ಕುಡಿದರೆ ಈ ಕೆಳಗಿನ ಸಮಸ್ಯೆಗಳು ಎದುರಾಗಬಹುದು:
- ನಿದ್ರಾಹೀನತೆ: ಸಂಜೆ ವೇಳೆಯಲ್ಲಿ ಕಾಫಿ ಕುಡಿದರೆ ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ.
- ಆತಂಕ: ಅತಿಯಾದ ಕೆಫೀನ್ ಸೇವನೆಯಿಂದ ಹೃದಯದ ಬಡಿತ ಹೆಚ್ಚಾಗುವುದು, ದೇಹದಲ್ಲಿ ನಡುಕ ಮತ್ತು ಆತಂಕ ಉಂಟಾಗಬಹುದು.
- ಜೀರ್ಣಕ್ರಿಯೆಯ ಸಮಸ್ಯೆಗಳು: ಕಾಫಿ ದೇಹದಲ್ಲಿ ಆಮ್ಲೀಯತೆಯನ್ನು (Acidity) ಹೆಚ್ಚಿಸುತ್ತದೆ, ಆದ್ದರಿಂದ ಬರಿ ಹೊಟ್ಟೆಯಲ್ಲಿ ಅತಿಯಾಗಿ ಕಾಫಿ ಕುಡಿಯುವುದು ಒಳ್ಳೆಯದಲ್ಲ.
- ಮೂಳೆಗಳ ದೌರ್ಬಲ್ಯ: ಅತಿಯಾಗಿ ಕಾಫಿ ಕುಡಿಯುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿ ಮೂಳೆಗಳು ದುರ್ಬಲಗೊಳ್ಳಬಹುದು.



