ಮಡಿಕೇರಿ : ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಆನೆ-ಮಾನವ ಸಂಘರ್ಷ ತಡೆಗಟ್ಟುವಲ್ಲಿ ಸಚಿವರು ವಿಫಲರಾಗಿದ್ದಾರೆ ಮತ್ತು ಸಿ ಅಂಡ್ ಡಿ ಜಮೀನು ಸಮಸ್ಯೆ ಬಗೆಹರಿದಿಲ್ಲ ಎಂದು ಆರೋಪಿಸಿ ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಸಚಿವರು ದುಬಾರೆಗೆ ತೆರಳುವ ಮಾರ್ಗದ ಗುಡ್ಡೆ ಹೊಸೂರು ಬಳಿ ರಸ್ತೆ ತಡೆ ನಡೆಸಲು ಕಾರ್ಯಕರ್ತರು ಸಜ್ಜಾಗಿದ್ದರು.
ಗುಡ್ಡೆಹೊಸೂರಿನ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಜಮಾಯಿಸಿದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ಕೂಡಲೇ ಎರಡು ವಾಹನಗಳಲ್ಲಿ ವಶಕ್ಕೆ ಪಡೆದು ಸ್ಥಳಾಂತರಿಸಿದರು. ಈ ವೇಳೆ ವಾಹನದ ಒಳಗಿನಿಂದಲೇ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಕಾಂಗ್ರೆಸ್ ಸರ್ಕಾರ, ಅರಣ್ಯ ಸಚಿವ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಜಿಲ್ಲೆಯಲ್ಲಿ ವನ್ಯಜೀವಿಗಳ ಹಾವಳಿ ಮಿತಿಮೀರಿದ್ದು, ಸುಮಾರು 30ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಬಗ್ಗೆ ಗಮನಹರಿಸಬೇಕಾದ ಸಚಿವರು ಎರಡೂವರೆ ವರ್ಷಗಳ ಬಳಿಕ ಜಿಲ್ಲೆಗೆ ಆಗಮಿಸುತ್ತಿರುವುದು ವಿಪರ್ಯಾಸ. ಜನರ ಸಮಸ್ಯೆಗಳನ್ನು ಸಚಿವರಿಗೆ ಮನವರಿಕೆ ಮಾಡಲು ಮುಂದಾದ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಮೂಲಕ ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.



