Thursday, May 7, 2026
Google search engine

Homeರಾಜ್ಯಸುದ್ದಿಜಾಲಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಬೇಕು: ಡಾ. ಸಿ ಎನ್ ಮಂಜುನಾಥ್

ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಬೇಕು: ಡಾ. ಸಿ ಎನ್ ಮಂಜುನಾಥ್

ರಾಮನಗರ:  ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಹೆಚ್ಚಾಗಿ ಬೋರ್‌ವೆಲ್‌ಗಳಿಗೆ ನೀರು ಲಭಿಸಲಿದೆ, ಆ ಮೂಲಕ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದಾಗಿದೆ, ಆದ್ದರಿಂದ ಜಿಲ್ಲೆಯ ಕೆರೆಗಳಿಗೆ ತುಂಬಿಸುವ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಲೋಕಸಭಾ ಸದಸ್ಯರಾದ ಮಂಜುನಾಥ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು.

ಅವರು ಗುರುವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಲ್ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳು ತ್ವರಿತ ಗತಿಯಲ್ಲಿ ಪೂರ್ಣಗೊಳ್ಳಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕಾಮಗಾರಿಗಳನ್ನು ಪೂರ್ಣಗೊಳಿಸದ ಗುತ್ತಿಗೆದಾರರಿಗೆ ಇದುವರೆಗೂ 65 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರು ಸಭೆಗೆ ಮಾಹಿತಿ ನೀಡಿದಾಗ ಜೆಜೆಎಂ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದರು ಕಟ್ಟುನಿಟ್ಟಿನ ಸೂಚನೆ  ನೀಡಿದರು.

ನರೇಗಾ ಯೋಜನೆಯಡಿ ಕೆಲವೆಡೆ ಇಂಗುಗುಂಡಿಗಳನ್ನು ತೋಡಲಾಗುತ್ತದೆ, ನಂತರದ  ಕೆಲವೇ ದಿನಗಳಲ್ಲಿ ಅವುಗಳನ್ನು ಮುಚ್ಚಲಾಗುತ್ತಿದೆ. ಭೂಮಿಗೆ ನೀರು ಬಸಿದು ಅಂರ್ತಜಲ ಹೆಚ್ಚಳವಾಗುವಲ್ಲಿ ಇಂಗುಗುಂಡಿಗಳು ಹಾಗೂ ಚೆಕ್ ಡ್ಯಾಂಗಳ ಪಾತ್ರ ಮಹತ್ವದ್ದಾಗಿದೆ, ಇಂತಹ ಕಾರ್ಯಗಳಲ್ಲಿ ಸರ್ಕಾರದ ಜವಾಬ್ದಾರಿಯೊಂದಿಗೆ ಸಾರ್ವಜನಿಕರ ಜವಾಬ್ದಾರಿಯೂ ಮುಖ್ಯ. ನೀರನ್ನು ಭೂಮಿಗೆ ಇಂಗಿಸುವ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕವಾದ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಅವರು ತಿಳಿಸಿದರು.

ರಸ್ತೆ ಮೇಲೆ ಬಿದ್ದ ಮಳೆ ನೀರು ವ್ಯರ್ಥವಾಗದಂತೆ ಮಳೆ ನೀರು ಕೊಯ್ಲಿಗೆ ಕ್ರಮ ವಹಿಸುವ ಮೂಲಕ ಕೆರೆಗಳನ್ನು ತುಂಬಿಸಬೇಕು. ಬೋರ್‌ವೆಲ್‌ಗಳು ಬತ್ತದಂತೆ ನೋಡಿಕೊಳ್ಳಬೇಕು. ಕೃಷಿ ಹೊಂಡಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಕೆರೆ ನಾಲೆಗಳನ್ನು ಶುಚಿಗೊಳಿಸಬೇಕು ಈ ಮೂಲಕ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಅಗತ್ಯ ಕ್ರಮ ವಹಿಸಿ ಎಂದರು.

ಜಿಲ್ಲೆಯ ಕೆರೆಗಳ ಒತ್ತುವರಿಯಾಗಿರುವ ಬಗ್ಗೆ ದಿಶಾ ಸಮಿತಿ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಎಲ್ಲಾ ಕೆರೆಗಳ ಜಾಗ ಸಮೀಕ್ಷೆ ನಡೆಸಲಾಗಿದ್ದು ಒಟ್ಟು 1,700 ಎಕರೆ ಕೆರೆ ಭೂಮಿ ಒತ್ತುವರಿಯಾಗಿದೆ, ಮುಂದಿನ ದಿನಗಳಲ್ಲಿ ಒತ್ತುವರಿ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮಂಜುನಾಥ್ ಅವರು ಮಾತನಾಡಿ, ದೇಶದಲ್ಲಿ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕೆರೆಗಳನ್ನು ಡ್ರೋಣ್ ಮೂಲಕ ಸಮೀಕ್ಷೆ ಮಾಡಲಾಗಿದೆ. ಅಧಿಕಾರಿಗಳು ತಮ್ಮ ಕಾರ್ಯ ಕ್ಷೇತ್ರದ ಜವಾಬ್ದಾರಿಯನ್ನರಿತು ಸೇವಾ ಮನೋಭಾವದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಆಡಳಿತಯಂತ್ರ ಚುರುಕಾಗಾಬೇಕು. ಜನಪರ ಸೇವೆ ಮಾಡಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಚನ್ನಪಟ್ಟಣ ತಾಲ್ಲೂಕು ಆಸ್ಪತ್ರೆ ಕಿರಿದಾಗಿದ್ದು ಅದನ್ನು ವಿಸ್ತರಿಸಲು ಸಾಧ್ಯವಿಲ್ಲ. ಹೊಸ ಜಾಗ ಗುರುತಿಸಿ 200 ಹಾಸಿಗೆಗಳಿರುವ ಹೊಸ ಆಸ್ಪತ್ರೆ ನಿರ್ಮಿಸುವುದು ಮಾತ್ರವಲ್ಲದೇ ಅಗತ್ಯವಿರುವ ವೈದ್ಯರು ಸೇರಿದಂತೆ ಸಿಬ್ಬಂದಿಗಳನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದರಲ್ಲದೇ ರಾಮನಗರದ ಅರ್ಚಕರಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರು ಹಾಗೂ ಕಾರ್ಯದರ್ಶಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಂಸದರು ಹೇಳಿದರು.

ಸಿಎಸ್‌ಆರ್ ನಿಧಿಯಡಿ ಕನಕಪುರ ತಾಲ್ಲೂಕು ಆಸ್ಪತ್ರೆಗೆ ಅಗತ್ಯವಿರುವ 31 ಲಕ್ಷ ರೂ. ಮೌಲ್ಯದ ಶಸ್ತ್ರಚಿಕಿತ್ಸೆ ಪರಿಕರಗಳನ್ನು ಶ್ರೀಘ್ರವಾಗಿ ನೀಡಲಾಗುವುದು. ಬಿಸಿಲಿನ ತಾಪಮಾನದಿಂದ ತಪ್ಪಿಸಿಕೊಳ್ಳಲು ಅನುಸರಿಸಬೇಕಾದ ಅಗತ್ಯ ಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕೆಂದು ಸೂಚಿಸಿದರು.

ಚನ್ನಪಟ್ಟಣದಲ್ಲಿ ಹಾವು ಕಚ್ಚಿ ಬಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ಚನ್ನಪಟ್ಟಣದ ಆಸ್ಪತ್ರೆಯಲ್ಲಿ ಔಷಧಿ ಕೊರತೆ ಇಲ್ಲ. ಆದರೂ ವೈದ್ಯಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟಿದ್ದಾನೆ. ಕೂಡಲೆ ಸಂಬಂಧಿಸಿದ ವೈದ್ಯಾಧಿಕಾರಿಗಳನ್ನು ಕೆಲಸದಿಂದ ಅಮಾನತುಗೊಳಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ 24 ಪಶು ವೈದ್ಯರ ಹುದ್ದೆ ಖಾಲಿ ಇದೆ. ವೈದ್ಯರ ಹಾಗೂ ಔಷಧಿಗಳ ಕೊರತೆ ನಿವಾರಣೆಗೆ ಸಂಬಂಧಿಸಿದ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು ಎಂದರು. ಆನೆಗಳ ಹಾವಳಿ ತಪ್ಪಿಸಲು ತಡೆಗೋಡೆ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾ ಅರಣ್ಯಾಧಿಕಾರಿಗೆ ತಿಳಿಸಿದರು.

ಕಳೆದ ವರ್ಷ ಶೇ. 60ರಷ್ಟಿದ್ದ ಚನ್ನಪಟ್ಟಣ ತಾಲ್ಲೂಕು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮ ಪಡಿಸಲು ಶ್ರಮಿಸಿದ ಚನ್ನಪಟ್ಟಣ ತಾಲ್ಲೂಕು ತಹಶಿಲ್ದಾರ್ ಗಿರೀಶ್ ಅವರನ್ನು ಸಂಸದರು ಅಭಿನಂದಿಸಿ ಪ್ರಶಂಸಿದರು. ಇತರೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯ ನಿವರ್ಹಿಸಬೇಕೆಂದರು.

ಪ್ರವಾಸೋದ್ಯಮ ಇಲಾಖೆ ವತಿಯಿಂದ ರಾಮನಗರದ ರಂಗರಾಯರದೊಡ್ಡಿ ಹಾಗೂ ನಲ್ಲಿಗುಡ್ಡೆ ಕರೆಗಳಲ್ಲಿ ಬೋಟಿಂಗ್ ಮಾಡಲಾಗಿದ್ದು, ಪ್ರವಾಸಿಗರ ಸುರಕ್ಷತೆಯ ದೃಷ್ಠಿಯಿಂದ ಕೆರೆಯಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸುವಂತೆ ತಿಳಿಸಿದರು.

ರಸ್ತೆ ಅಪಘಾತ ತಪ್ಪಿಸಲು ರಸ್ತೆ ಸುರಕ್ಷತಾ ಕ್ರಮಗಳ ಕುರಿತು ಅರಿವು ಮೂಡಿಸಬೇಕು ಎಂದು ಪೊಲೀಸ್ ಇಲಾಖೆ ಅಧಿಕಾರಿಗೆ ಸೂಚಿಸಿದರು. ಕೃಷಿ, ತೋಟಗಾರಿಕೆ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಗಳ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಮಾಹಿತಿ ಪಡೆದು ಪರಿಶೀಲಿಸಿ ಎಲ್ಲಾ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸೂಚಿಸಿದರು.

ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಡಿವೈಎಸ್ಪಿ ರಾಜೇಂದ್ರ ವೇದಿಕೆಯಲ್ಲಿದ್ದರು.

ದಿಶಾ ಸಮಿತಿಯ ನಾಮನಿರ್ದೇಶನ ಸದಸ್ಯರಾದ ನರಸಿಂಹಮೂರ್ತಿ, ರಾಜೇಶ್, ಶಿವಣ್ಣ, ರೇಖಾ, ಶೋಭಾ, ಸಿದ್ಧರಾಮ ಹಾಗೂ ಶ್ರೀನಿವಾಸ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular