Thursday, May 21, 2026
Google search engine

Homeರಾಜ್ಯಬಿಡದಿ ಟೌನ್‌ಶಿಪ್ ವಿವಾದ ; ರೈತರ ಜಮೀನು ಕಬಳಿಸಲು ಸರ್ಕಾರ ಸಂಚು : ಆರ್‌.ಅಶೋಕ್ ಕಿಡಿ

ಬಿಡದಿ ಟೌನ್‌ಶಿಪ್ ವಿವಾದ ; ರೈತರ ಜಮೀನು ಕಬಳಿಸಲು ಸರ್ಕಾರ ಸಂಚು : ಆರ್‌.ಅಶೋಕ್ ಕಿಡಿ

ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆಗಾಗಿ ರೈತರ ಭೂಮಿ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕ್ರಮ ರೈತರಿಗೆ ದ್ರೋಹವಾಗಿದ್ದು, ಅವರನ್ನು ಬೀದಿಗೆ ತಳ್ಳುವ ಪ್ರಯತ್ನ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಪ್ರದೇಶವು ತೆಂಗು, ಮಾವು, ರೇಷ್ಮೆ ಹಾಗೂ ಹಾಲು ಉತ್ಪಾದನೆಗೆ ಪ್ರಸಿದ್ಧವಾದ ಫಲವತ್ತಾದ ಕೃಷಿಭೂಮಿಯಾಗಿದ್ದು, ಇಂತಹ ಭೂಮಿಯನ್ನು ಸರ್ಕಾರ ಕಬಳಿಸಲು ಮುಂದಾಗಿದೆ ಎಂದು ದೂರಿದ್ದಾರೆ.

ಅಲ್ಲದೆ ಡಿಸಿಎಂ ಡಿ.ಕೆ.ಶಿವಕುಮಾರ್ ನಡೆಸಿದ ಸಭೆಗಳಲ್ಲಿ ನಕಲಿ ರೈತರನ್ನು ಕರೆಸಿ, ಭೂಸ್ವಾಧೀನಕ್ಕೆ ಬೆಂಬಲವಿದೆ ಎಂಬ ವಾತಾವರಣ ಸೃಷ್ಟಿಸಲಾಗಿದೆ. ಆದರೆ ನಿಜವಾದ ರೈತರು ಯಾವುದೇ ಕಾರಣಕ್ಕೂ ತಮ್ಮ ಜಮೀನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ಬಿಡದಿ ರೈತರ ಹೋರಾಟಕ್ಕೆ ಬಿಜೆಪಿ ಆರಂಭದಿಂದಲೇ ಬೆಂಬಲ ನೀಡುತ್ತಿದ್ದು, ಮುಂದೆಯೂ ಅವರ ಪರವಾಗಿ ನಿಲ್ಲಲಿದೆ ಎಂದ ಅಶೋಕ್ ಬೆಂಗಳೂರಿನ ಸುತ್ತಮುತ್ತ ಈಗಾಗಲೇ ಸಾಕಷ್ಟು ಖಾಲಿ ಜಾಗಗಳಿವೆ. ಕೆಂಪೇಗೌಡ ಲೇಔಟ್ ಮತ್ತು ಶಿವರಾಮ ಕಾರಂತ ಲೇಔಟ್‌ಗಳಲ್ಲಿ ಲಕ್ಷಾಂತರ ಫ್ಲ್ಯಾಟ್‌ಗಳು ಮಾರಾಟವಾಗದೇ ಉಳಿದಿರುವಾಗ ಹೊಸ ಟೌನ್‌ಶಿಪ್ ಅಗತ್ಯವೇನು ಎಂದು ಪ್ರಶ್ನಿಸಿದ್ದಾರೆ.

ಬಿಡದಿಯಲ್ಲೇ ಸುಮಾರು 3,000 ಎಕರೆ ಸರ್ಕಾರಿ ಜಮೀನು ಇದೆ. ಅದನ್ನು ಬಳಸದೇ ರೈತರ ಖಾಸಗಿ ಜಮೀನಿನ ಮೇಲೆ ಸರ್ಕಾರ ಕಣ್ಣು ಹಾಕಿದೆ ಎಂದು ಆರೋಪಿಸಿದರು. ಇದೇ ವೇಳೆ, ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯ ಐದು ನಗರ ನಿಗಮಗಳಿಗೆ ಚುನಾವಣೆ ನಡೆಸುವುದನ್ನು ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಟೀಕಿಸಿದರು.

ಸರ್ಕಾರ ಬಹಳ ಹಿಂದೆಯೇ ಚುನಾವಣೆ ನಡೆಸಬೇಕಾಗಿತ್ತು. ಆದರೆ ಕಾಂಗ್ರೆಸ್‌ನ ಆಂತರಿಕ ಸಮೀಕ್ಷೆಗಳು ಐದು ನಿಗಮಗಳಲ್ಲೂ ಸೋಲು ಖಚಿತ ಎಂದು ಸೂಚಿಸುತ್ತಿವೆ. ಅದಕ್ಕಾಗಿಯೇ ಚುನಾವಣೆ ಮುಂದೂಡಲಾಗುತ್ತಿದೆ. ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಕಾಂಗ್ರೆಸ್‌ನ ಒಳಜಗಳದಿಂದ ಕಸದ ಸಮಸ್ಯೆ ಹೆಚ್ಚಾಗಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವವರೆಗೆ ಚುನಾವಣೆ ಮುಂದೂಡುವ ಯತ್ನ ನಡೆಯುತ್ತಿದೆ ಎಂದು ಅಶೋಕ್ ಆರೋಪಿಸಿದರು.

ನ್ಯಾಯಾಲಯ ನಿಗದಿಪಡಿಸಿದ ಗಡುವಿನೊಳಗೆ ಚುನಾವಣೆ ನಡೆಸಬೇಕು. ಬಿಜೆಪಿ ಚುನಾವಣೆಗೆ ಸಿದ್ಧವಾಗಿದ್ದು, ಸರ್ಕಾರ ತಕ್ಷಣ ಚುನಾವಣಾ ದಿನಾಂಕ ಘೋಷಿಸಬೇಕು ಎಂದು ಆಗ್ರಹಿಸಿದರು.

RELATED ARTICLES
- Advertisment -
Google search engine

Most Popular