ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ತೀವ್ರವಾಗಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಬೆಳವಣಿಗೆಗಳ ಬಗ್ಗೆ ನಾಳೆ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ.
ಇಂದು ಮಾಜಿ ಪ್ರಧಾನಿ ಜವಹರಲಾಲ್ ಅವರ 62ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ, ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದ ಬಳಿಕ ನೆಹರೂ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಕೊಂಡಾಡಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳು ದೆಹಲಿ ಪ್ರವಾಸ, ಮುಖ್ಯಮಂತ್ರಿ ಬದಲಾವಣೆ ಕುರಿತು ಪ್ರಶ್ನಿಸಿದಾಗ, ಮುಖ್ಯಮಂತ್ರಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ರಾಜಕೀಯ ವಿದ್ಯಮಾನಗಳ ಕುರಿತು ಕೇಳಿದಾಗ, “ನಾಳೆ ಮಾತನಾಡುತ್ತೇನೆ, ಏನೇ ಇದ್ದರೂ ನಾಳೆಯೇ ಮಾತನಾಡುತ್ತೇನೆ” ಎಂದು ಮಾತ್ರ ಉತ್ತರಿಸಿದರು.
ಸಾಮಾನ್ಯವಾಗಿ ಮಾಧ್ಯಮಗಳ ಪ್ರಶ್ನೆಗಳಿಗೆ ಗಟ್ಟಿಯಾಗಿ ಪ್ರತಿಕ್ರಿಯಿಸುವ ಸಿದ್ದರಾಮಯ್ಯ, ಮಾಧ್ಯಮಗಳು ಅಡ್ಡ ಪ್ರಶ್ನೆ ಹಾಕಿದರೆ ಏನಯ್ಯ ಎಂದು ಹೇಳಿ ಪತ್ರಕರ್ತರಿಗೆ ಮರು ಪ್ರಶ್ನೆ ಹಾಕುತ್ತಾರೆ. ಆದರೆ ಇಂದು ಮಾತನಾಡುವಾಗಲೇ ಸಿದ್ದರಾಮಯ್ಯ ಬಹಳ ಬೇಸರದಲ್ಲಿ ಇದ್ದಾರೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು.
ಇಂದು ಮುಖ್ಯಮಂತ್ರಿ ಅವರಿಗೆ ಯಾವುದೇ ಅಧಿಕೃತ ಕಾರ್ಯಕ್ರಮಗಳಿರಲಿಲ್ಲ. ವಿಧಾನಸೌಧದ ಕಾರ್ಯಕ್ರಮದ ಬಳಿಕ ಅವರು ನೇರವಾಗಿ ತಮ್ಮ ಅಧಿಕೃತ ನಿವಾಸ ‘ಕಾವೇರಿ’ಗೆ ತೆರಳಿದರು.
ಇನ್ನು ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಸಿದ್ದರಾಮಯ್ಯ ಅವರು ನಾಳೆ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದ್ದು, ಬಳಿಕ ಸುದ್ದಿಗೋಷ್ಠಿ ನಡೆಸಿ ತಮ್ಮ ಮುಂದಿನ ನಿರ್ಧಾರಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.



