ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದ 135ನೇ ಸಂಚಿಕೆಯಲ್ಲಿ ಭಾರತೀಯ ಸಂಸ್ಕೃತಿಯು ಜಾಗತಿಕ ಮಟ್ಟದಲ್ಲಿ ಹೇಗೆ ಮುನ್ನಲೆಗೆ ಬರುತ್ತಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ವಿಶ್ವದ ವಿವಿಧ ಮೂಲೆಗಳಲ್ಲಿ ಜನರು ಭಾರತದ ಸಂಗೀತ, ಆಧ್ಯಾತ್ಮಿಕತೆ ಮತ್ತು ಪ್ರಾಚೀನ ಸಂಪ್ರದಾಯಗಳನ್ನು ಅಪ್ಪಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಉದಾಹರಣೆಯಾಗಿ ಕೆರಿಬಿಯನ್ ರಾಷ್ಟ್ರವಾದ ಡೊಮಿನಿಕನ್ ರಿಪಬ್ಲಿಕ್‌ನ ಸ್ಪ್ಯಾನಿಷ್ ಮಾತನಾಡುವ ಸ್ಥಳೀಯರ ಗುಂಪೊಂದನ್ನು ಅವರು ಉಲ್ಲೇಖಿಸಿದ್ದು, ಈ ಗುಂಪು ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡಲು ಮತ್ತು ವೈದಿಕ ಮಂತ್ರಗಳ ಪಠಣವನ್ನು ಕಲಿಯಲು ಒಂದಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಈ ಬಗ್ಗೆ ಮಾತನಾಡುತ್ತಾ “ಇಂದು ಭಾರತೀಯ ಸಂಸ್ಕೃತಿ ವಿಶ್ವದ ವಿವಿಧ ಭಾಗಗಳನ್ನು ತಲುಪುತ್ತಿದೆ. ನಮ್ಮ ಹಾಡುಗಳು, ಸಂಗೀತ ಮತ್ತು ಆಧ್ಯಾತ್ಮವನ್ನು ಜಗತ್ತಿನಾದ್ಯಂತ ಜನರು ಅರಿತುಕೊಳ್ಳುತ್ತಿದ್ದಾರೆ ಮತ್ತು ಅಳವಡಿಸಿಕೊಳ್ಳುತ್ತಿದ್ದಾರೆ. ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಕೆರಿಬಿಯನ್ ಸಮುದ್ರದಲ್ಲಿ ‘ಡೊಮಿನಿಕನ್ ರಿಪಬ್ಲಿಕ್’ ಎಂಬ ದೇಶವಿದೆ. ಅಲ್ಲಿರುವ ಭಾರತೀಯರ ಸಂಖ್ಯೆ ಕೇವಲ 100 ಅಥವಾ ಅದಕ್ಕಿಂತ ಕಡಿಮೆ ಇರಬಹುದು. ಆದಾಗ್ಯೂ, ಅಲ್ಲಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಕ್ಕೆ ಸಂಬಂಧಿಸಿದ ಅತ್ಯಂತ ಶ್ಲಾಘನೀಯ ಪ್ರಯತ್ನವೊಂದು ನಡೆಯುತ್ತಿದೆ.”
ಅಲ್ಲಿನ ಸ್ಪ್ಯಾನಿಷ್ ಭಾಷೆ ಮಾತನಾಡುವ ಕೆಲವರು ಸೇರಿ ಒಂದು ತಂಡವನ್ನು ರಚಿಸಿಕೊಂಡಿದ್ದಾರೆ. ಈ ತಂಡದ ಹೆಸರು ‘ಬ್ರಹ್ಮಕಮಲ್ ಡೊಮಿನಿಕಾನಾ’ (Brahmakamal Dominicana). ಈ ತಂಡದ ಸದಸ್ಯರು ಒಟ್ಟಾಗಿ ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡುತ್ತಿದ್ದಾರೆ.
ಆಡಿಯೋ ರೆಕಾರ್ಡಿಂಗ್ಸ್ ಮೂಲಕವೇ ಕಲಿಕೆ!
ವಿಶೇಷವೆಂದರೆ, ಈ ತಂಡದ ಸದಸ್ಯರಿಗೆ ಯಾವುದೇ ಔಪಚಾರಿಕ ತರಬೇತಿ ಸಿಕ್ಕಿಲ್ಲ. ಕೇವಲ ಆಡಿಯೋ ರೆಕಾರ್ಡಿಂಗ್‌ಗಳನ್ನು ಕೇಳುವ ಮೂಲಕವೇ ಅವರು ವೈದಿಕ ಮಂತ್ರಗಳ ನಿಖರವಾದ ಉಚ್ಚಾರಣೆಯನ್ನು ಕಲಿತಿದ್ದಾರೆ. ಇಂದು ಅವರು ಅನೇಕ ಮಂತ್ರಗಳನ್ನು ಅತ್ಯಂತ ಸ್ಪಷ್ಟವಾಗಿ ಮತ್ತು ಸುಂದರವಾಗಿ ಪಠಿಸುತ್ತಾರೆ.
ಅವರು ಪುರುಷ ಸೂಕ್ತಂ, ಶ್ರೀ ಸೂಕ್ತಂ, ಶ್ರೀ ರುದ್ರಂ, ದುರ್ಗಾ ಸೂಕ್ತಂ, ಶ್ರೀದೇವಿ ಮಹಾತ್ಮ್ಯಂ ಗಳನ್ನು ಪಠಿಸುತ್ತಾರೆ.
“ಭಾರತದಿಂದ ಇಷ್ಟು ದೂರದಲ್ಲಿದ್ದೂ ನಮ್ಮ ಸಂಪ್ರದಾಯಗಳನ್ನು ಕಲಿಯುವ ಅವರ ಈ ಪ್ರಯತ್ನ ಎಲ್ಲರಿಗೂ ಅತ್ಯಂತ ಪ್ರೇರಣಾದಾಯಕವಾಗಿದೆ. ‘ಬ್ರಹ್ಮಕಮಲ್ ಡೊಮಿನಿಕಾನಾ’ ತಂಡದ ಎಲ್ಲಾ ಸದಸ್ಯರ ಪ್ರಯತ್ನಗಳಿಗೆ ನಾನು ಶುಭ ಹಾರೈಸುತ್ತೇನೆ. ಭಾರತೀಯ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸಲು ನಿರಂತರವಾಗಿ ಶ್ರಮಿಸುತ್ತಿರುವ ಇಂತಹ ಪ್ರತಿಯೊಬ್ಬರನ್ನು ನಾನು ಹೃದಯಪೂರ್ವಕವಾಗಿ ಶ್ಲಾಘಿಸುತ್ತೇನೆ,” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.



