ನವದೆಹಲಿ : ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಐಪಿಎಲ್ (IPL) ಭವಿಷ್ಯದ ಕುರಿತು ಸದ್ಯ ಭಾರೀ ಚರ್ಚೆಗಳು ನಡೆಯುತ್ತಿವೆ. ಮಾಧ್ಯಮ ವರದಿಗಳ ಪ್ರಕಾರ, ಮುಂದಿನ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನ ನಡೆಯಲಿರುವ ಟ್ರೇಡ್ ವಿಂಡೋದಲ್ಲಿ (Trade Window) ಅವರು ತಂಡವನ್ನು ಬದಲಾಯಿಸುವ ಸಾಧ್ಯತೆ ಇದೆ.
ಒಂದು ವೇಳೆ ಹಾರ್ದಿಕ್ ಮುಂಬೈ ತಂಡವನ್ನು ತೊರೆದರೆ, ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಬರೋಬ್ಬರಿ 7 ಫ್ರಾಂಚೈಸಿಗಳು ತೀವ್ರ ಆಸಕ್ತಿ ತೋರಿಸುತ್ತಿವೆ ಎನ್ನಲಾಗಿದೆ.
ರೇಸ್ನಲ್ಲಿ ಮುಂಚೂಣಿಯಲ್ಲಿರುವ ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್ (CSK): ಮಾಧ್ಯಮವೊಂದರ ವರದಿಯ ಪ್ರಕಾರ, ಹಾರ್ದಿಕ್ ಅವರನ್ನು ತನ್ನದಾಗಿಸಿಕೊಳ್ಳುವ ರೇಸ್ನಲ್ಲಿ ಸಿಎಸ್ಕೆ ಎಲ್ಲರಿಗಿಂತ ಮುಂದಿದೆ.
ಕೋಲ್ಕತಾ ನೈಟ್ ರೈಡರ್ಸ್ (KKR): ಕೆಕೆಆರ್ ತಂಡ ಕೂಡ ಹಾರ್ದಿಕ್ ಅವರನ್ನು ಖರೀದಿಸಲು ಭರ್ಜರಿ ಪ್ರಯತ್ನ ನಡೆಸುತ್ತಿದೆ.
ರಾಜಸ್ಥಾನ್ ರಾಯಲ್ಸ್ (RR): ಹಾರ್ದಿಕ್ರನ್ನು ಸೆಳೆಯಲು ರಾಜಸ್ಥಾನ್ ರಾಯಲ್ಸ್ ಕೂಡ ಪ್ರಬಲ ಪೈಪೋಟಿ ನೀಡುತ್ತಿದೆ.
ಆಸಕ್ತಿ ತೋರಿಸದ ಆರ್ ಸಿಬಿ ಮತ್ತು ಎಸ್ಆರ್ಹೆಚ್
ಈ ವರದಿಯಲ್ಲಿ ಅತ್ಯಂತ ಕುತೂಹಲಕಾರಿ ವಿಷಯವೆಂದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳು ಮಾತ್ರ ಹಾರ್ದಿಕ್ ಪಾಂಡ್ಯ ಅವರ ಮೇಲೆ ಯಾವುದೇ ಆಸಕ್ತಿ ತೋರಿಸಿಲ್ಲ. ಉಳಿದ 7 ಫ್ರಾಂಚೈಸಿಗಳು ಟ್ರೇಡ್ ವಿಂಡೋ ಮೂಲಕ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಆಯ್ಕೆಗಳ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿವೆ.
ಹಾರ್ದಿಕ್ ಐಪಿಎಲ್ ಜರ್ನಿ
2015 ರಲ್ಲಿ ಮುಂಬೈ ಇಂಡಿಯನ್ಸ್ ಮೂಲಕ ಐಪಿಎಲ್ ವೃತ್ತಿಜೀವನ ಆರಂಭಿಸಿದ ಹಾರ್ದಿಕ್, 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಸತತ ಎರಡು ಸೀಸನ್ ಮುನ್ನಡೆಸಿದರು. ನಂತರ ಮತ್ತೆ ಮುಂಬೈ ತಂಡಕ್ಕೆ ನಾಯಕನಾಗಿ ಮರಳಿದರು. ಆದರೆ, ಅವರ ನಾಯಕತ್ವದಲ್ಲಿ ಮುಂಬೈ ಪ್ರದರ್ಶನ ನಿರಾಶಾದಾಯಕವಾಗಿದ್ದು, ಕಳೆದ ಮೂರು ಸೀಸನ್ಗಳಲ್ಲಿ ತಂಡ ಕ್ರಮವಾಗಿ 10, 3 ಮತ್ತು 9 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್ ಪಾಂಡ್ಯ!
ಐಪಿಎಲ್ ಚರ್ಚೆಗಳ ನಡುವೆಯೇ, ಹಾರ್ದಿಕ್ ಪಾಂಡ್ಯ ಮತ್ತೊಂದು ಪ್ರಮುಖ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಸದ್ಯ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಅವರು, ತಮ್ಮ ಮುಂಬೈ ನಿವಾಸವನ್ನು ತೊರೆದು ಬೆಂಗಳೂರನ್ನು ತಮ್ಮ ಹೊಸ ತರಬೇತಿ ಕೇಂದ್ರವನ್ನಾಗಿ (Training Base) ಮಾಡಿಕೊಂಡಿದ್ದಾರೆ.
ಖಾಯಂ ವಾಸ್ತವ್ಯ: ಬಿಸಿಸಿಐನ (BCCI) ಸೆಂಟರ್ ಆಫ್ ಎಕ್ಸಲೆನ್ಸ್ (COE) ಬಳಿಯೇ ಇರಲು ಹಾರ್ದಿಕ್ ಬೆಂಗಳೂರಿನ ಹೊರವಲಯದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ.
ಮೊದಲ ಭಾರತೀಯ ಕ್ರಿಕೆಟರ್ : ತಮ್ಮ ವೃತ್ತಿಜೀವನದ ಮುಂದಿನ ದಿನಗಳಿಗಾಗಿ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಖಾಯಂ ತರಬೇತಿ ಕೇಂದ್ರವನ್ನಾಗಿ ಮಾಡಿಕೊಂಡ ಮೊದಲ ಭಾರತೀಯ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಆಗಿದ್ದಾರೆ.
ಗಾಯದ ಸಮಸ್ಯೆ: ಪ್ರಸ್ತುತ ಕ್ವಾಡ್ರಿಸೆಪ್ಸ್ (Quadriceps) ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಅವರು, ಇದೇ ಕಾರಣಕ್ಕಾಗಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ವೈಟ್-ಬಾಲ್ ಸರಣಿಯಿಂದಲೂ ಹೊರಗುಳಿದಿದ್ದಾರೆ. ಸದ್ಯ ಬೆಂಗಳೂರಿನಲ್ಲೇ ಇದ್ದು ಫಿಟ್ನೆಸ್ ಕಡೆಗೆ ಗಮನ ಹರಿಸುತ್ತಿದ್ದಾರೆ. (ಏಜೆನ್ಸಿಸ್)



