Friday, July 3, 2026
Google search engine

Homeರಾಜಕೀಯಮೇಕೆದಾಟು ಪಾದಯಾತ್ರೆ ಚುನಾವಣಾ ಗಿಮಿಕ್ಕೇ? : ಡಿ.ಕೆ.ಶಿವಕುಮಾರ್ ವಿರುದ್ಧ ಆರ್.ಅಶೋಕ್ ವಾಗ್ದಾಳಿ

ಮೇಕೆದಾಟು ಪಾದಯಾತ್ರೆ ಚುನಾವಣಾ ಗಿಮಿಕ್ಕೇ? : ಡಿ.ಕೆ.ಶಿವಕುಮಾರ್ ವಿರುದ್ಧ ಆರ್.ಅಶೋಕ್ ವಾಗ್ದಾಳಿ

ಬೆಂಗಳೂರು : ಮೇಕೆದಾಟು ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದು, “ಅಧಿಕಾರಕ್ಕಾಗಿ ಮೇಕೆದಾಟು ಪಾದಯಾತ್ರೆ ನಡೆಸಿದವರು ಈಗ ತಮಿಳುನಾಡು ಕಾಂಗ್ರೆಸ್ ಮುಂದೆ ಮೌನವಾಗಿರುವುದೇಕೆ?” ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಚುನಾವಣೆಗೆ ಮುನ್ನ ಅಧಿಕಾರ ಹಿಡಿಯುವ ಉದ್ದೇಶದಿಂದ ಮೇಕೆದಾಟು ಪಾದಯಾತ್ರೆ ನಡೆಸಿದ್ದೀರಿ. ಆದರೆ ಈಗ ನಿಮ್ಮದೇ ಪಕ್ಷದ ತಮಿಳುನಾಡು ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಗೆ ಒಂದು ಇಟ್ಟಿಗೆಯನ್ನೂ ಹಾಕಲು ಬಿಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರೂ ನೀವು ಮೌನ ವಹಿಸಿದ್ದೀರಿ” ಎಂದು ಟೀಕಿಸಿದ್ದಾರೆ.

ಇನ್ನೂ ನಿಮಗೆ ನಿಜವಾಗಿಯೂ ಕನ್ನಡಿಗರ ಹಿತದ ಬಗ್ಗೆ ಕಾಳಜಿ ಇದ್ದರೆ, ಚೆನ್ನೈಗೆ ಪಾದಯಾತ್ರೆ ಮಾಡಿ ತಮಿಳುನಾಡು ಕಾಂಗ್ರೆಸ್ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಿ ನಿಮ್ಮ ರಾಜಕೀಯ ಬದ್ಧತೆಯನ್ನು ಸಾಬೀತುಪಡಿಸಿ ಎಂದು ಅಶೋಕ್ ಸವಾಲು ಹಾಕಿದ್ದಾರೆ.

ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯದ ಹಿತಕ್ಕಿಂತ ದೆಹಲಿ ಹೈಕಮಾಂಡ್ ಮತ್ತು ತಮಿಳುನಾಡಿನ ಮೈತ್ರಿ ರಾಜಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದ ಅವರು, “ಕಾವೇರಿ ಕಣಿವೆಯ ರೈತರ ಹಿತ ಹಾಗೂ ಬೆಂಗಳೂರಿನ ಕೋಟ್ಯಂತರ ಜನರ ಕುಡಿಯುವ ನೀರಿನ ಹಕ್ಕಿಗಿಂತ ಮೈತ್ರಿ ರಾಜಕಾರಣವೇ ಮುಖ್ಯವಾಗಿದೆಯೇ?” ಎಂದು ಪ್ರಶ್ನಿಸಿದ್ದಾರೆ.

ಮೇಕೆದಾಟು ಯೋಜನೆ ಜಾರಿಗೊಳಿಸುವ ಇಚ್ಛಾಶಕ್ತಿ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಆರೋಪಿಸಿದ ಅಶೋಕ್, ಚುನಾವಣೆ ವೇಳೆ ಮೇಕೆದಾಟು ಹೆಸರನ್ನು ರಾಜಕೀಯ ಗಿಮಿಕ್‌ಗೆ ಬಳಸಿಕೊಂಡ ಕಾಂಗ್ರೆಸ್, ಈಗ ತಮಿಳುನಾಡು ಕಾಂಗ್ರೆಸ್‌ನ ಹೇಳಿಕೆಯನ್ನು ಖಂಡಿಸುವ ಧೈರ್ಯವನ್ನೂ ತೋರಿಸುತ್ತಿಲ್ಲ. ಇದು ಕನ್ನಡಿಗರಿಗೆ ಮಾಡಿದ ವಿಶ್ವಾಸಘಾತ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಜನರು ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿರುವ ಅಶೋಕ್, ಮೇಕೆದಾಟು ಯೋಜನೆ ಕುರಿತು ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular