Friday, July 3, 2026
Google search engine

Homeರಾಜಕೀಯನೈಟ್ ರೌಂಡ್‌ನಲ್ಲಿ ಅಧಿಕಾರಿಗಳ ಕಳ್ಳಾಟ ಬಯಲು : ಕೃಷ್ಣ ಬೈರೇಗೌಡ ಗರಂ

ನೈಟ್ ರೌಂಡ್‌ನಲ್ಲಿ ಅಧಿಕಾರಿಗಳ ಕಳ್ಳಾಟ ಬಯಲು : ಕೃಷ್ಣ ಬೈರೇಗೌಡ ಗರಂ

ಬೆಂಗಳೂರು : ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತಡರಾತ್ರಿ ನಗರದ ವಿವಿಧ ಪ್ರದೇಶಗಳಲ್ಲಿ ಗಸ್ತು ತಿರುಗಿ ಸ್ವಚ್ಛತೆ, ಸಂಚಾರ ದಟ್ಟಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ತಪ್ಪು ಮಾಹಿತಿ ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸ್ಥಳದಲ್ಲೇ ಅಧಿಕಾರಿಯನ್ನು ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡರು.

ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ರಸ್ತೆ ಸಮಗ್ರ ಅಭಿವೃದ್ಧಿ ಯೋಜನೆ ಹಿನ್ನೆಲೆಯಲ್ಲಿ ಲೋರಿ ಜಂಕ್ಷನ್‌ನಿಂದ ಇಬ್ಲೂರು ಜಂಕ್ಷನ್‌ವರೆಗೆ ಸಚಿವರು ಸ್ಥಳ ಪರಿಶೀಲನೆ ನಡೆಸಿದರು. ಪರಿಶೀಲನೆಯ ಬಳಿಕ ಮಾತನಾಡಿದ ಅವರು, ಹೊರ ವರ್ತುಲ ರಸ್ತೆ (ಒಆರ್‌ಆರ್‌) ಅಭಿವೃದ್ಧಿ ಯೋಜನೆಯ ಅಂತಿಮ ವಿನ್ಯಾಸವನ್ನು ಸ್ಥಳೀಯ ನಿವಾಸಿಗಳು, ಅಪಾರ್ಟ್‌ಮೆಂಟ್‌ ಸಂಘಗಳು ಹಾಗೂ ಇತರ ಹಿತಾಸಕ್ತಿದಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

ಸುಮಾರು ₹450 ಕೋಟಿ ವೆಚ್ಚದಲ್ಲಿ ಹೊರ ವರ್ತುಲ ರಸ್ತೆಯನ್ನು ಪುನರ್‌ನಿರ್ಮಿಸಿ ಅಭಿವೃದ್ಧಿಪಡಿಸುವ ಉದ್ದೇಶವಿದ್ದು, ಕಾಮಗಾರಿ ಆರಂಭಿಸುವ ಮೊದಲು ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಹೊರ ವರ್ತುಲ ರಸ್ತೆಯುದ್ದಕ್ಕೂ ಅಪಾರ್ಟ್‌ಮೆಂಟ್‌ಗಳು, ಐಟಿ ಕಂಪನಿಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ಹೆಚ್ಚಿರುವುದರಿಂದ ಸ್ಥಳೀಯ ಪರಿಸ್ಥಿತಿಯನ್ನು ಆಳವಾಗಿ ಅಧ್ಯಯನ ಮಾಡಿ ರಸ್ತೆ ವಿನ್ಯಾಸ ಸಿದ್ಧಪಡಿಸಲಾಗುವುದು. ಬಳಿಕ ಸಾರ್ವಜನಿಕರ ಸಲಹೆ ಪಡೆದು ಅಂತಿಮ ಅನುಮೋದನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ನಗರದಲ್ಲಿ ಸುಮಾರು ₹2,000 ಕೋಟಿ ವೆಚ್ಚದಲ್ಲಿ 260 ಕಿ.ಮೀ. ಉದ್ದದ ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿಯೂ ಕೈಗೆತ್ತಿಕೊಳ್ಳಲಾಗುತ್ತಿದೆ. ಮಳೆಗಾಲದಲ್ಲಿ ಪ್ರವಾಹ ಸಮಸ್ಯೆ ಹೆಚ್ಚಿರುವ ಪ್ರದೇಶಗಳಿಗೆ ಆದ್ಯತೆ ನೀಡಿ ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲೇ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಅಧಿಕಾರಿಗೆ ಸಚಿವರ ಕ್ಲಾಸ್‌ : ಪರಿಶೀಲನೆ ವೇಳೆ ರಸ್ತೆ ಅಗೆದಿರುವ ಬಗ್ಗೆ ಪ್ರಶ್ನಿಸಿದ ಸಚಿವರಿಗೆ ಅಧಿಕಾರಿಯೊಬ್ಬರು, “ಬಿಡಬ್ಲ್ಯೂಎಸ್‌ಎಸ್‌ಬಿ ಕಾಮಗಾರಿಗಾಗಿ ರಸ್ತೆ ಅಗೆದಲಾಗಿದೆ” ಎಂದು ಉತ್ತರಿಸಿದರು. ಆದರೆ ಸ್ಥಳದಲ್ಲಿದ್ದ ಜಲಮಂಡಳಿ ಅಧಿಕಾರಿಗಳು ಅದು ತಮ್ಮ ಇಲಾಖೆಯ ಕೆಲಸವಲ್ಲ ಎಂದು ಸ್ಪಷ್ಟಪಡಿಸಿದರು.

ನಂತರ ಅಧಿಕಾರಿ ಬೆಸ್ಕಾಂ ಮೇಲೆ ಹೊಣೆ ಹೊರಿಸಲು ಯತ್ನಿಸಿದರೂ, ಬೆಸ್ಕಾಂ ಅಧಿಕಾರಿಗಳೂ ಅದನ್ನು ನಿರಾಕರಿಸಿದರು. ಇದರಿಂದ ಅಸಮಾಧಾನಗೊಂಡ ಸಚಿವ ಕೃಷ್ಣ ಬೈರೇಗೌಡ, ಓಎಫ್‌ಸಿ ಕೇಬಲ್‌ಗಾಗಿ ರಸ್ತೆ ಅಗೆದು ಸರ್ಕಾರದ ವಿವಿಧ ಇಲಾಖೆಗಳ ಮೇಲೆ ಸುಳ್ಳು ಆರೋಪ ಮಾಡುತ್ತೀರಾ? ಎಂದು ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಪರಿಶೀಲನೆ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಜಲಮಂಡಳಿ ಅಧ್ಯಕ್ಷೆ ಮಂಜುಳಾ, ವಿಶೇಷ ಆಯುಕ್ತ ನಿತೀಶ್, ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್. ಹಾಗೂ ರಮೇಶ್ ಕೆ.ಎನ್., ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular