ವಯನಾಡು: ಕೇರಳದ ವಯನಾಡಿನ ಸುರಂಗ ರಸ್ತೆ ನಿರ್ಮಾಣ ಸ್ಥಳದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿ ಕಾಣೆಯಾಗಿರುವ ಐವರಿಗಾಗಿ ಶೋಧ ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ವಯನಾಡು ಎಸ್ಪಿ ದೇವಮನೋಹರ್ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ ಹಾಗೂ ಶ್ವಾನದಳವನ್ನು ನಿಯೋಜಿಸಲಾಗಿದ್ದು, ಶೋಧ ಕಾರ್ಯಕ್ಕಾಗಿ ಪ್ರದೇಶವನ್ನು ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ. ನದಿಯ ಕೆಳಭಾಗದಲ್ಲಿಯೂ ಹುಡುಕಾಟ ನಡೆಯುತ್ತಿದ್ದು, ಚೂರಲ್‌ಮಲಾ ಕಡೆಗೆ ಹೋಗುವ ರಸ್ತೆಯನ್ನು ತೆರವುಗೊಳಿಸಲಾಗಿದೆ. ಆದರೆ ಘಟನಾ ಸ್ಥಳದಲ್ಲಿರುವ ಅಪಾರ ಪ್ರಮಾಣದ ಮಣ್ಣನ್ನು ಶೋಧ ಕಾರ್ಯ ಪೂರ್ಣಗೊಂಡ ಬಳಿಕವೇ ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕುಸಿತ ಮಾನವ ನಿರ್ಮಿತ ವಿಪತ್ತು ಎಂದು ರಾಜ್ಯ ಸರ್ಕಾರ ಆರೋಪಿಸಿದ್ದು, ನಿರ್ಮಾಣ ಸ್ಥಳದಲ್ಲಿ ಸಂಗ್ರಹವಾಗಿದ್ದ ಮಣ್ಣನ್ನು ತೆರವುಗೊಳಿಸದಿರುವುದೇ ದುರಂತಕ್ಕೆ ಕಾರಣ ಎಂದು ಹೇಳಿದೆ. ಆದರೆ ನಿರ್ಮಾಣ ಕಂಪನಿಯ ಜನರಲ್ ಮ್ಯಾನೇಜರ್ ಈ ಆರೋಪವನ್ನು ತಳ್ಳಿಹಾಕಿದ್ದು, ಭೂಕುಸಿತ ನಿರ್ಮಾಣ ಪ್ರದೇಶಕ್ಕಿಂತ ಮೇಲ್ಭಾಗದಲ್ಲಿ ಸಂಭವಿಸಿದ್ದು, ಸಂಗ್ರಹವಾಗಿದ್ದ ಮಣ್ಣಿಗೂ ಘಟನೆಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು, ಸಂಗ್ರಹವಾಗಿದ್ದ ಮಣ್ಣು ಭೂಕುಸಿತದ ತೀವ್ರತೆಯನ್ನು ಹೆಚ್ಚಿಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮೃತಪಟ್ಟವರು ಮಧ್ಯಪ್ರದೇಶದ ಚಂದ್ರಬನ್, ಬಿಹಾರದ ಬಿಕಾಶ್ ಕುಮಾರ್ ಹಾಗೂ ಜಾರ್ಖಂಡ್‌ನ ಅನ್ಮೋಲ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಏಳು ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಧಿಕಾರಿಗಳು ಪರಿಸ್ಥಿತಿಯನ್ನು ನಿಗಾದಲ್ಲಿಟ್ಟಿದ್ದಾರೆ.



