Saturday, July 11, 2026
Google search engine

Homeದೇಶರಾಮ ಮಂದಿರ ದೇಣಿಗೆ ದುರುಪಯೋಗದ ಬಗ್ಗೆ ಮೋದಿ ಮೌನ ಏಕೆ? " : ಕೆ.ಸಿ.ವೇಣುಗೋಪಾಲ್ ಪ್ರಶ್ನೆ

ರಾಮ ಮಂದಿರ ದೇಣಿಗೆ ದುರುಪಯೋಗದ ಬಗ್ಗೆ ಮೋದಿ ಮೌನ ಏಕೆ? ” : ಕೆ.ಸಿ.ವೇಣುಗೋಪಾಲ್ ಪ್ರಶ್ನೆ

ತ್ರಿಶೂರ್ : ಅಯೋಧ್ಯೆಯ ರಾಮ ಮಂದಿರದ ದೇಣಿಗೆ ದುರುಪಯೋಗದ ಆರೋಪಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದು ಏಕೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪ್ರಶ್ನಿಸಿದ್ದಾರೆ.

ಗುರುವಾಯೂರ್ ದೇವಸ್ಥಾನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಪ್ರಧಾನಿ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಲಿದೆ ಎಂದು ಹೇಳಿದರು. ಈ ವಿಷಯವನ್ನು ನಾವು ದೇಶಾದ್ಯಂತ ಪ್ರಸ್ತಾಪಿಸುತ್ತಿದ್ದೇವೆ ಮತ್ತು ಮುಂದೆಯೂ ಪ್ರಸ್ತಾಪಿಸುತ್ತೇವೆ. ಈ ಪ್ರಕರಣ ಕೋಟ್ಯಂತರ ಭಕ್ತರ ನಂಬಿಕೆಗೆ ಸಂಬಂಧಿಸಿದೆ. ಆದರೆ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರು ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಅವರು ಆರೋಪಿಸಿದರು.

ಇದೇ ವೇಳೆ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವುದನ್ನು ಉಲ್ಲೇಖಿಸಿದ ವೇಣುಗೋಪಾಲ್, ನಿಜವಾದ ಸತ್ಯ ಹೊರಬರಬೇಕಾದರೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿಯೇ ತನಿಖೆ ನಡೆಯಬೇಕು. ಆಗ ಮಾತ್ರ ಈ ಪ್ರಕರಣದ ಹಿಂದಿರುವ ನಿಜವಾದ ಹೊಣೆಗಾರರು ಬಹಿರಂಗಗೊಳ್ಳುತ್ತಾರೆ ಎಂದು ಹೇಳಿದರು.

ವಿಎಚ್‌ಪಿ ಮತ್ತು ಆರ್‌ಎಸ್‌ಎಸ್ ಸೇರಿದಂತೆ ಸಂಘ ಪರಿವಾರದ ಸಂಘಟನೆಗಳು ಹಲವು ವರ್ಷಗಳಿಂದ ದೇವಾಲಯದ ಹೆಸರಿನಲ್ಲಿ ಭಕ್ತರಿಂದ ದೇಣಿಗೆ ಸಂಗ್ರಹಿಸಿದ್ದು, ಅದರ ದುರುಪಯೋಗದ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ ಎಂದು ಆರೋಪಿಸಿದರಲ್ಲದೆ, ದೇವಾಲಯದ ಟ್ರಸ್ಟ್‌ನಲ್ಲಿ ನಡೆದಿರುವ ಎಲ್ಲ ಬೆಳವಣಿಗೆಗಳು ಸಂಬಂಧಪಟ್ಟ ಅಧಿಕಾರಿಗಳ ಅರಿವಿನಲ್ಲಿಯೇ ನಡೆದಿವೆ ಎಂದು ಕೂಡ ಅವರು ಹೇಳಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಇದು ಭಕ್ತಿಯ ವಿಷಯವಲ್ಲ. ಹಿಂದೂಗಳ ಹೆಸರಿನಲ್ಲಿ ರಾಜಕೀಯ ಮಾಡುವುದು ಮತ್ತು ಜನರನ್ನು ವಿಭಜಿಸುವುದೇ ಅವರ ಉದ್ದೇಶ. ಇದು ಕೇವಲ ಹಣದ ದುರುಪಯೋಗವಲ್ಲ, ಭಕ್ತರ ನಂಬಿಕೆಗೆ ಆದ ಪೆಟ್ಟು ಎಂದು ಟೀಕಿಸಿದರು. ಇದೇ ರೀತಿಯ ಆರೋಪಗಳು ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳ ವಿಚಾರದಲ್ಲಿಯೂ ಕೇಳಿಬರುತ್ತಿವೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular