ರಾಮನಗರ : ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ಪೊಲೀಸರು ದರ್ಪ ತೋರಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ರೈತರ ಹೋರಾಟವನ್ನು ಹತ್ತಿಕ್ಕಲು ಪೊಲೀಸರನ್ನು ಬಳಸಿಕೊಳ್ಳುತ್ತಿರುವುದು ನಿರಂಕುಶ ಆಡಳಿತದ ಪರಮಾವಧಿ ಎಂದು ಟೀಕಿಸಿದ್ದಾರೆ. ಇನ್ನೂ ರಾಜ್ಯ ಸರ್ಕಾರಕ್ಕೆ ಕೃಷಿ ಮತ್ತು ರೈತರ ಹಿತಾಸಕ್ತಿಗಿಂತ ರಿಯಲ್ ಎಸ್ಟೇಟ್ ವ್ಯವಹಾರವೇ ಮುಖ್ಯವಾಗಿದೆ ಎನ್ನುವುದು ಬಿಡದಿ ಟೌನ್‌ಶಿಪ್ ಯೋಜನೆಯ ಮೂಲಕ ಮತ್ತೊಮ್ಮೆ ಸಾಬೀತಾಗಿದೆ ಎಂದು ಆರೋಪಿಸಿದರು.
ಇನ್ನೂ ಕೃಷಿ ಭೂಮಿ ಉಳಿಸಿಕೊಳ್ಳಲು ಟ್ರ್ಯಾಕ್ಟರ್‌ಗಳ ಮೂಲಕ ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾದ ಅನ್ನದಾತರನ್ನು ಪೊಲೀಸರು ತಡೆದಿದ್ದಾರೆ. ರೈತರ ನ್ಯಾಯಸಮ್ಮತ ಹೋರಾಟವನ್ನು ಅಧಿಕಾರದ ಬಲದಿಂದ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ. ಬಿಡದಿ ಭಾಗದ ರೈತರ ಹೋರಾಟಕ್ಕೆ ತಮ್ಮ ಬೆಂಬಲ ಮುಂದುವರಿಯಲಿದೆ. ರೈತರ ಬದುಕಿಗೆ ಧಕ್ಕೆ ತರುವ ಸರ್ಕಾರದ ನೀತಿಗಳ ವಿರುದ್ಧ ಸದಾ ರೈತರ ಪರವಾಗಿ ನಿಲ್ಲುವುದಾಗಿ ಅವರು ಹೇಳಿದರು.
ಇದೇ ವೇಳೆ ಪೊಲೀಸ್ ಇಲಾಖೆ ಲಾಠಿಚಾರ್ಜ್ ಆರೋಪವನ್ನು ತಳ್ಳಿಹಾಕಿದೆ. ಪ್ರತಿಭಟನೆಗೆ ಟ್ರ್ಯಾಕ್ಟರ್‌ಗಳ ಮೂಲಕ ರೈತರು ಮತ್ತು ಮುಖಂಡರನ್ನು ಕರೆತರಲು ಅನುಮತಿ ನೀಡಿರಲಿಲ್ಲ ಅಷ್ಟೇ. ಪ್ರತಿಭಟನೆ ವೇಳೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ರೈತರ ಮೇಲೆ ಲಾಠಿಚಾರ್ಜ್ ನಡೆದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಬಿಡದಿ ಟೌನ್‌ಶಿಪ್ ಯೋಜನೆ ವಿಚಾರದಲ್ಲಿ ರೈತರ ಪರ ಮತ್ತು ವಿರೋಧಿ ಬಣಗಳ ನಡುವಿನ ಭಿನ್ನಾಭಿಪ್ರಾಯಗಳು ಮುಂದುವರಿದಿದ್ದು, ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದೆ.



