ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಬಿಡುವ ಬದಲು ಸಮಿತಿ ರಚಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನರ ಸಹಾನುಭೂತಿ ಗಳಿಸುವ ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ಯೋಜನೆಗೆ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರಗಳು ಭೂಸ್ವಾಧೀನಕ್ಕೆ ಯಾವುದೇ ಅಂತಿಮ ಆದೇಶ ಹೊರಡಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ಯೋಜನೆಯನ್ನು ಹಿಂದೆ ಕಾಂಗ್ರೆಸ್ ಸಹ ವಿರೋಧಿಸಿತ್ತು. ಆದರೆ ಈಗ ಅದನ್ನೇ ಜಾರಿಗೊಳಿಸಲು ಮುಂದಾಗಿರುವುದು ದ್ವಂದ್ವ ನಿಲುವಿನ ಉದಾಹರಣೆಯಾಗಿದೆ ಎಂದು ಹೇಳಿದರು.
ಬಿಡದಿ ಟೌನ್‌ಶಿಪ್ ವಿರುದ್ಧ ರೈತರು ದೀರ್ಘಕಾಲದಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸಂವಾದ ನಡೆಸುವ ಬದಲು ಪೊಲೀಸರ ಮೂಲಕ ದಮನಕ್ಕೆ ಮುಂದಾಗಿದೆ. ಕೊಲೆ ಯತ್ನ ಮತ್ತು ಬೆದರಿಕೆ ಆರೋಪಗಳಡಿ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ. ಇಂತಹ ಪರಿಸ್ಥಿತಿಯಲ್ಲಿ ಸದನ ಸಮಿತಿ ರಚಿಸಿರುವುದು ಕೇವಲ ಅಧಿವೇಶನದ ಒತ್ತಡದಿಂದ ಪಾರಾಗಲು ಮಾಡಿರುವ ರಾಜಕೀಯ ತಂತ್ರ ಎಂದು ಆರೋಪಿಸಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಯೋಜನೆ ಕುರಿತು ಪ್ರಸ್ತಾಪ ಮಾಡಿದ್ದರೇ ಹೊರತು, ಭೂಸ್ವಾಧೀನಕ್ಕೆ ಯಾವುದೇ ಆದೇಶ ನೀಡಿರಲಿಲ್ಲ. ಅವರ ಅವಧಿಯಲ್ಲಿ ರೈತರ ಅಭಿಪ್ರಾಯಕ್ಕೆ ವಿರುದ್ಧವಾಗಿ ಯೋಜನೆ ಜಾರಿಗೊಳಿಸುವುದಿಲ್ಲ ಎಂದು ವಿಧಾನಸಭೆಯಲ್ಲೇ ಭರವಸೆ ನೀಡಲಾಗಿತ್ತು. ನಂತರ ಯಡಿಯೂರಪ್ಪ, ಡಿ.ವಿ. ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲೂ ಯಾವುದೇ ಸ್ವಾಧೀನ ಪ್ರಕ್ರಿಯೆ ನಡೆದಿಲ್ಲ ಎಂದು ಹೇಳಿದರು.
ಡಿಎಲ್ಎಫ್ ಸಂಸ್ಥೆ 400 ಕೋಟಿ ರೂ. ಠೇವಣಿ ಇಟ್ಟಿದ್ದರೂ ಬಿಜೆಪಿ ಸರ್ಕಾರ ಆ ಹಣವನ್ನು ಹಿಂದಿರುಗಿಸಿತ್ತು. ಬಿಜೆಪಿ ಸರ್ಕಾರಕ್ಕೆ ಯೋಜನೆಯಲ್ಲಿ ಆಸಕ್ತಿ ಇದ್ದಿದ್ದರೆ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಮುಂದುವರಿಯಬಹುದಿತ್ತು. ಆದರೆ ಅಂತಹ ಪ್ರಯತ್ನವೇ ನಡೆದಿಲ್ಲ. ನಂತರ ಹೊಸ ಭೂಸ್ವಾಧೀನ ಕಾಯ್ದೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ವಿಷಯವನ್ನು ಮರುಪರಿಶೀಲಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ವಿವರಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿರದ ಸಂದರ್ಭದಲ್ಲಿ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿ ಯೋಜನೆಗೆ ವಿರೋಧ ವ್ಯಕ್ತಪಡಿಸಿತ್ತು. ಈಗ ಆ ಸಮಿತಿಯ ವರದಿಯನ್ನು ಸಾರ್ವಜನಿಕಗೊಳಿಸಲಿ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ವಿಧಾನಸಭೆಯಲ್ಲಿ ರೈತರ ಪರವಾಗಿ ಮಾತನಾಡಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿದ್ದರು. ಈಗ ಅದೇ ನಾಯಕರು ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿರುವುದು ಆಶ್ಚರ್ಯಕರ ಎಂದು ಟೀಕಿಸಿದರು.
2016ರಲ್ಲಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಯೋಜನೆ ಘೋಷಿಸಲಾಯಿತು. ಬಳಿಕ ಸ್ಮಾರ್ಟ್ ಸಿಟಿ ಯೋಜನೆ ಪ್ರದೇಶ ಪ್ರಾಧಿಕಾರ ರಚನೆಯೂ ನಡೆಯಿತು. ಹೀಗಾಗಿ ಯೋಜನೆಗೆ ಸಂಬಂಧಿಸಿದ ಪ್ರಮುಖ ಆಡಳಿತಾತ್ಮಕ ಕ್ರಮಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ನಡೆದಿವೆ ಎಂದು ಹೇಳಿದರು.
2018ರಲ್ಲಿ ವಿಧಾನಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಆಗಿನ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಯಾವುದೇ ಭೂಸ್ವಾಧೀನ ನಡೆದಿಲ್ಲ ಎಂದು ಉತ್ತರಿಸಿದ್ದರು. 2024ರಲ್ಲಿ ಸರ್ಕಾರ ಹೊರಡಿಸಿದ ಗೆಜೆಟ್‌ನಲ್ಲಿ 25 ವರ್ಷಗಳವರೆಗೆ ಭೂಮಿಯನ್ನು ಪರಭಾರೆ ಮಾಡಬಾರದು ಎಂಬ ಷರತ್ತು ವಿಧಿಸಿರುವುದು, ಯೋಜನೆಯ ಹಿಂದಿನ ಉದ್ದೇಶದ ಬಗ್ಗೆ ಅನುಮಾನ ಹುಟ್ಟಿಸುತ್ತದೆ ಎಂದು ಆರೋಪಿಸಿದರು.
ಬಿಡದಿಯಲ್ಲಿ ಪ್ರತಿಭಟನೆ ಆರಂಭವಾಗಿ 435 ದಿನಗಳಾದರೂ ಸರ್ಕಾರ ಸಮಿತಿ ರಚಿಸಿರಲಿಲ್ಲ. ಅಧಿವೇಶನ ಆರಂಭವಾದ ಬಳಿಕ ಮಾತ್ರ ಸಮಿತಿ ರಚಿಸಿರುವುದು ಜನರ ಆಕ್ರೋಶವನ್ನು ತಾತ್ಕಾಲಿಕವಾಗಿ ಶಮನಗೊಳಿಸುವ ಪ್ರಯತ್ನವಾಗಿದೆ. ಸಮಿತಿಯ ವರದಿ ಬಂದ ನಂತರ ಮತ್ತೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಜನರ ಹೋರಾಟದ ಮುಂದೆ ಯಾವುದೇ ಸರ್ಕಾರ ದೊಡ್ಡದಲ್ಲ. ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಬದಲು ಅವರನ್ನು ಅವರ ಪಾಡಿಗೆ ಬಿಡಬೇಕು. ಮುಂದಿನ ಸರ್ಕಾರ ಈ ವಿಚಾರವನ್ನು ಸೂಕ್ತವಾಗಿ ನಿರ್ವಹಿಸಲಿದೆ ಎಂದು ಆರ್. ಅಶೋಕ ಹೇಳಿದರು.



