ವಾಷಿಂಗ್ಟನ್/ಟೆಹ್ರಾನ್ : ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದ್ದು, ಕಳೆದ 24 ಗಂಟೆಗಳಲ್ಲಿ ಅಮೆರಿಕ ಮೂರನೇ ಬಾರಿ ಇರಾನ್ ಮೇಲಿನ ದಾಳಿಯನ್ನು ನಡೆಸಿದೆ. ಅಮೆರಿಕ ಇರಾನ್ ಬಂದರುಗಳಿಗೆ ನೌಕಾ ದಿಗ್ಬಂಧನ ವಿಧಿಸಿರುವ ಹಿನ್ನೆಲೆ, ಹರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.
ಇರಾನ್ನ ಅಹ್ವಾಜ್ ನಗರದ ಶಾಹಿದ್ ಬಘೈ ಆಸ್ಪತ್ರೆ ಸಮೀಪ ಅಮೆರಿಕದ ಕ್ಷಿಪಣಿ ದಾಳಿ ನಡೆದಿದ್ದು, ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ರೋಗಿಗಳನ್ನು ತುರ್ತುವಾಗಿ ಸ್ಥಳಾಂತರಿಸಲಾಗಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ಆಸ್ಪತ್ರೆಯ ಮೇಲೆಯೇ ನೇರ ದಾಳಿ ನಡೆದಿದೆಯೇ ಎಂಬುದನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲ.
ಅಮೆರಿಕದ ದಾಳಿಗಳಲ್ಲಿ ಹಲವು ಸೇನಾ ಗುರಿಗಳು ಹೊಡೆತಕ್ಕೊಳಗಾಗಿದ್ದು, ಬುಶೆಹರ್ ಪ್ರದೇಶದ ಸಮೀಪವೂ ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ. ಇರಾನ್ ಅಧಿಕಾರಿಗಳ ಪ್ರಕಾರ ನಾಗರಿಕ ಸಾವು-ನೋವುಗಳೂ ಸಂಭವಿಸಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅಮೆರಿಕದ ಪ್ರಾದೇಶಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ.
ಬಹ್ರೇನ್, ಕುವೈತ್ ಹಾಗೂ ಜೋರ್ಡನ್ನಲ್ಲಿರುವ ಅಮೆರಿಕದ ಸೌಲಭ್ಯಗಳು ಗುರಿಯಾಗಿವೆ ಎಂದು ವರದಿಯಾಗಿದೆ. ಆದರೆ ಅಮೆರಿಕದ ಅತ್ಯಾಧುನಿಕ ಬೇಹುಗಾರಿಕಾ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂಬ ದಾವೆಗೆ ಈವರೆಗೆ ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ. ಇದರ ನಡುವೆ ಅಮೆರಿಕದ ಸೆಂಟ್ರಲ್ ಕಮಾಂಡ್, ಇರಾನ್ ಬಂದರುಗಳ ದಿಗ್ಬಂಧನವನ್ನು ಉಲ್ಲಂಘಿಸಲು ಯತ್ನಿಸಿದ್ದ ತೈಲ ಟ್ಯಾಂಕರ್ನ್ನು ನಿಷ್ಕ್ರಿಯಗೊಳಿಸಿರುವುದಾಗಿ ತಿಳಿಸಿದೆ.
ಪೆನ್ಸಿಲ್ವೇನಿಯಾದ ರಕ್ಷಣಾ ಶೃಂಗಸಭೆಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಇರಾನ್ ಮಾತುಕತೆಗೆ ಬರಲು ಬಯಸುತ್ತಿದೆ. ಆದರೆ ಒಪ್ಪಂದಕ್ಕೆ ಬರದಿದ್ದರೆ ಮುಂದಿನ ಹಂತದಲ್ಲಿ ವಿದ್ಯುತ್ ಸ್ಥಾವರಗಳು ಹಾಗೂ ಸೇತುವೆಗಳ ಮೇಲೆ ದಾಳಿ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.



