ಹಾಸನ : ನಾಡಹಬ್ಬ ಮೈಸೂರು ದಸರಾದಲ್ಲಿ ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತ ಹೆಗ್ಗಳಿಕೆಗೆ ಪಾತ್ರವಾಗಿದ್ದ ಗಜರಾಜ ಅರ್ಜುನನ ಭವ್ಯ ಸ್ಮಾರಕವನ್ನು ಸಕಲೇಶಪುರ ತಾಲೂಕಿನ ದಬ್ಬಳ್ಳಿ ಕಟ್ಟೆ ಅರಣ್ಯ ಪ್ರದೇಶದಲ್ಲಿ ಸಚಿವ ಈಶ್ವರ್ ಖಂಡ್ರೆ ಲೋಕಾರ್ಪಣೆಗೊಳಿಸಿದರು.
2023ರ ಡಿಸೆಂಬರ್ 4ರಂದು ದಬ್ಬಳ್ಳಿ ಕಟ್ಟೆ ಮೀಸಲು ಅರಣ್ಯದಲ್ಲಿ ನಡೆದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮದಗಜದೊಂದಿಗೆ ಹೋರಾಡಿ ಅರ್ಜುನ (64) ಮೃತಪಟ್ಟಿದ್ದ. ಬಳಿಕ ಆತ ಸಾವನ್ನಪ್ಪಿದ ಸ್ಥಳದಲ್ಲೇ ಅರಣ್ಯ ಇಲಾಖೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿತ್ತು. ಇದೀಗ ಸುಮಾರು ಎರಡೂವರೆ ವರ್ಷಗಳ ಬಳಿಕ ಆತನ ಸಮಾಧಿಯ ಮೇಲೆಯೇ ನಿರ್ಮಿಸಲಾದ ಆಕರ್ಷಕ ಪ್ರತಿಕೃತಿ ಇದೀಗ ಲೋಕಾರ್ಪಣೆಯಾಗಿದೆ.
ಅರ್ಜುನನ ನೆನಪನ್ನು ಶಾಶ್ವತಗೊಳಿಸುವ ಉದ್ದೇಶದಿಂದ ಫೈಬರ್ ಬಳಸಿ 10 ಅಡಿ ಎತ್ತರ ಹಾಗೂ 13 ಅಡಿ ಉದ್ದದ ಮೂರ್ತಿಯನ್ನು ನಿರ್ಮಿಸಲಾಗಿದ್ದು, ಈ ಪ್ರತಿಮೆ ಅರ್ಜುನನ ಮೂಲ ಸ್ವರೂಪವನ್ನು ಹೋಲುವಂತೆ ರೂಪುಗೊಂಡಿದ್ದು, ನೋಡಿದವರಿಗೆ ಸಾಕ್ಷಾತ್ ಗಜರಾಜನೇ ಎದುರು ನಿಂತಂತೆ ಭಾಸವಾಗುತ್ತದೆ. ಖ್ಯಾತ ಶಿಲ್ಪಿ ಧನಂಜಯ ಅವರು ಈ ಮೂರ್ತಿಯನ್ನು ನಿರ್ಮಿಸಿದ್ದಾರೆ.
ಇನ್ನೂ ಮೂರ್ತಿಯ ನಿರ್ಮಾಣ ಒಂದು ವರ್ಷದ ಹಿಂದೆಯೇ ಪೂರ್ಣಗೊಂಡಿದ್ದರೂ, ಸ್ಥಳದಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಉದ್ಘಾಟನೆ ವಿಳಂಬವಾಗಿತ್ತು. ಇದೀಗ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಸ್ಮಾರಕವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಸಂಸದ ಶ್ರೀಯಸ್ ಪಟೇಲ್, ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಸಿಮೆಂಟ್ ಮಂಜು, ಏಡುಕುಂಡಲ, ಸೌರಭ್ ಕುಮಾರ್, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತಾ ಉಪಸ್ಥಿತರಿದ್ದರು.
ಅರ್ಜುನನ ಸೇವೆ ಸರಣೀಯ : ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತ ಹೆಗ್ಗಳಿಕೆ ಅರ್ಜುನನದ್ದು. 60ಕ್ಕೂ ಹೆಚ್ಚು ವರ್ಷ ಕಾಡಾನೆ ಸೆರೆ ಕಾರ್ಯಾಚರಣೆ, ದಸರಾ ಸೇರಿದಂತೆ ನಾಡಿನ ಸೇವೆಯಲ್ಲಿ ತೊಡಗಿದ್ದ ಅರ್ಜುನನ ಸಾರಕ ಇದೀಗ ಪ್ರವಾಸಿಗರು ಹಾಗೂ ಆತನ ಅಭಿಮಾನಿಗಳಿಗೆ ಭಾವನಾತ್ಮಕ ತಾಣವಾಗಿ ರೂಪುಗೊಂಡಿದ್ದು, ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಹಾಗೂ ಸ್ಥಳಿಯ ಆಡಳಿತ ಸಮನ್ವಯದೊಂದಿಗೆ ಸಾರ್ವಜನಿಕರಿಗೆ ಸಾರಕ ವೀಕ್ಷಣೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.



