ರಾಮನಗರ: 26 ವರ್ಷದ ಯುವತಿಯನ್ನು ಮದುವೆಯಾಗಬೇಕೆಂಬ ಆಸೆ ಇಟ್ಟಿದ್ದ 15 ವರ್ಷದ ಬಾಲಕ, ಪೋಷಕರ ಬುದ್ಧಿವಾದದಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬಿಡದಿಯಲ್ಲಿ ನಡೆದಿದೆ. ಭೂಮಿಕಾ ಪೃಥ್ವಿ ಲೇಔಟ್ ನಿವಾಸಿ ಆರ್. ತನ್ಮಯ್ ನಾಯಕ್ ಮೃತ ಬಾಲಕನಾಗಿದ್ದಾನೆ.
ಬಿಡದಿಯ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತನ್ಮಯ್, ಎಚ್.ಎನ್. ಶೋಭಾ ಎಂಬ 26 ವರ್ಷದ ಯುವತಿಯೊಂದಿಗೆ ಆತ್ಮೀಯ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ವಿಷಯ ತಿಳಿದ ಪೋಷಕರು ಆಕೆಯನ್ನು ಭೇಟಿಯಾಗಬಾರದೆಂದು ಮಗನಿಗೆ ಬುದ್ಧಿವಾದ ಹೇಳಿದ್ದರು. ಇದರಿಂದ ಬೇಸರಗೊಂಡ ತನ್ಮಯ್ ಮನೆ ಬಿಟ್ಟು ಸ್ನೇಹಿತನ ಮನೆಯಲ್ಲಿ ವಾಸವಾಗಿದ್ದನು.
ಮಾರ್ಚ್ ತಿಂಗಳಲ್ಲಿ ಈ ಸಂಬಂಧ ಬಾಲಕನ ಪೋಷಕರು ಬಿಡದಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಯುವತಿಯನ್ನು ಕರೆಸಿ ಎಚ್ಚರಿಕೆ ನೀಡಿದ್ದರೂ, ಸಾಮಾಜಿಕ ಜಾಲತಾಣಗಳ ಮೂಲಕ ಇಬ್ಬರೂ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ. “ಶೋಭಾಳನ್ನು ಮದುವೆಯಾಗಲು ಸಾಧ್ಯವಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ತನ್ಮಯ್ ತಂದೆಗೆ ಹೇಳಿದ್ದನೆಂದು ಕುಟುಂಬದವರು ತಿಳಿಸಿದ್ದಾರೆ.
ಯುವತಿ ಜೊತೆ ಇದೇ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಏ.29ರಂದು ವಿಷ ಸೇವಿಸಿ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಸ್ನೇಹಿತರು ಚನ್ನಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ.4ರಂದು ಬಾಲಕ ಮೃತಪಟ್ಟಿದ್ದಾನೆ. ಯುವತಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಚನ್ನಪಟ್ಟಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



