ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು (ಗುರುವಾರ)   ನವದೆಹಲಿಯ 'ಭಾರತ ಮಂಟಪಂ'ನಲ್ಲಿ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (FICCI) ವಾರ್ಷಿಕ ಮಹಾಸಭೆ (AGM) ಹಾಗೂ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿಗಳು ದೇಶ-ವಿದೇಶಗಳಿಂದ ಆಗಮಿಸಿರುವ ಉದ್ಯಮಿಗಳು ಮತ್ತು ನೀತಿ ನಿರೂಪಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ (PMO) ಪ್ರಕಟಣೆ ತಿಳಿಸಿದೆ.   ಈ ಬಾರಿಯ ಫಿಕ್ಕಿ ವಾರ್ಷಿಕ ಸಮ್ಮೇಳನವನ್ನು ‘ಭಾರತ 2047’ (Bharat 2047) ಎಂಬ ವಿಶೇಷ ವಿಷಯದಡಿ (ಥೀಮ್) ಆಯೋಜಿಸಲಾಗಿದ್ದು, ಅಭಿವೃದ್ಧಿ ಹೊಂದಿದ ಭಾರತದ ಆರ್ಥಿಕ ಮಾರ್ಗಸೂಚಿಯ ಕುರಿತು ಇಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಸಮ್ಮೇಳನದಲ್ಲಿ ಭಾರತೀಯ ಕೈಗಾರಿಕಾ ವಲಯದ ದಿಗ್ಗಜರು, ವಿವಿಧ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEOs), ವಿವಿಧ ದೇಶಗಳ ರಾಯಭಾರಿಗಳು, ರಾಜತಾಂತ್ರಿಕರು ಮತ್ತು ಪ್ರಮುಖ ನೀತಿ ನಿರೂಪಕರು ಸೇರಿದಂತೆ 2,500ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ.   ಶತಮಾನೋತ್ಸವದ ಹೊಸ್ತಿಲಲ್ಲಿ ಫಿಕ್ಕಿ2026-27ನೇ ಸಾಲಿನ ಈ ಸಮ್ಮೇಳನವು ಫಿಕ್ಕಿ ಪಾಲಿಗೆ ಅತ್ಯಂತ ವಿಶೇಷವಾಗಿದೆ. ಏಕೆಂದರೆ ಈ ಸಂಸ್ಥೆಯು ತನ್ನ ಶತಮಾನೋತ್ಸವ ವರ್ಷಕ್ಕೆ ಕಾಲಿಟ್ಟಿದ್ದು, ಮುಂಬರುವ ಏಪ್ರಿಲ್ 7, 2027ರಂದು ಸ್ಥಾಪನೆಯಾಗಿ 100 ವರ್ಷಗಳನ್ನು ಪೂರೈಸಲಿದೆ. ದೇಶದ ಆರ್ಥಿಕ ನೀತಿಗಳ ನಿರೂಪಣೆಯಲ್ಲಿ ಭಾರತೀಯ ಉದ್ಯಮಗಳ ಪಾಲ್ಗೊಳ್ಳುವಿಕೆ ಅತ್ಯಂತ ಸೀಮಿತವಾಗಿದ್ದ 1927ರ ಕಾಲಘಟ್ಟದಲ್ಲಿ ಫಿಕ್ಕಿಗೆ ಅಡಿಪಾಯ ಹಾಕಲಾಯಿತು. ಸ್ವಾತಂತ್ರ್ಯದ ನಂತರ ದೇಶದ ಆರ್ಥಿಕ ಪರಿವರ್ತನೆ ಹಾಗೂ ಜಾಗತಿಕ ಆರ್ಥಿಕತೆಯೊಂದಿಗೆ ಭಾರತದ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ.  ಅಂಕಿಅಂಶಗಳ ಪ್ರಕಾರ, ಪ್ರಸ್ತುತ ಫಿಕ್ಕಿಯು ದೇಶದ ಸಾರ್ವಜನಿಕ, ಖಾಸಗಿ ಮತ್ತು ಬಹುರಾಷ್ಟ್ರೀಯ (MNC) ವಲಯಗಳ 2.5 ಲಕ್ಷಕ್ಕೂ ಹೆಚ್ಚು ಕಂಪನಿಗಳನ್ನು ಪ್ರತಿನಿಧಿಸುತ್ತಿದೆ. ನೇರ ಸದಸ್ಯತ್ವದ ಜೊತೆಗೆ 300ಕ್ಕೂ ಹೆಚ್ಚು ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಕೈಗಾರಿಕಾ ಸಂಘಗಳ ಬೃಹತ್ ಜಾಲವನ್ನು ಇದು ಹೊಂದಿದೆ. ಅಲ್ಲದೆ, ಜಾಗತಿಕ ಮಟ್ಟದಲ್ಲಿ ವ್ಯಾಪಾರ ಸಂಬಂಧಗಳನ್ನು ಬಲಪಡಿಸಲು 100ಕ್ಕೂ ಹೆಚ್ಚು ದೇಶಗಳ 250 ರಾಷ್ಟ್ರೀಯ ವಾಣಿಜ್ಯ ಸಂಘಟನೆಗಳೊಂದಿಗೆ ಫಿಕ್ಕಿ ಪಾಲುದಾರಿಕೆ ಒಪ್ಪಂದಗಳನ್ನು ಮಾಡಿಕೊಂಡಿದೆ.