ಮಧ್ಯಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿ ಹರ್ದೀಪ್ ಸಿಂಗ್ ಪುರಿ ಪ್ರಮಾಣವಚನ ಸ್ವೀಕಾರ

ನವದೆಹಲಿ : ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಂಗಳವಾರ ಮಧ್ಯಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ಸಂಸತ್ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ರಾಜ್ಯಸಭಾ ಸಭಾಪತಿ ಹಾಗೂ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಪುರಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಮಾಹಿತಿ ಹಂಚಿಕೊಂಡಿರುವ ಉಪರಾಷ್ಟ್ರಪತಿ ಕಚೇರಿಯು, ಮಧ್ಯಪ್ರದೇಶದಿಂದ ಆಯ್ಕೆಯಾದ ರಾಜ್ಯಸಭಾ ಸದಸ್ಯರಾಗಿ ಹರ್ದೀಪ್ ಸಿಂಗ್ ಪುರಿ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ತಿಳಿಸಿದೆ.ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಮನ್ಸುಖ್ ಮಾಂಡವೀಯ, ರಾಜೀವ್ ರಂಜನ್ ಸಿಂಗ್, ಅರ್ಜುನ್ ರಾಮ್ ಮೇಘವಾಲ್, ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಹರ್ದೀಪ್ ಸಿಂಗ್ ಪುರಿ ಅವರ ಪತ್ನಿ ಹಾಗೂ ಮಾಜಿ ರಾಜತಾಂತ್ರಿಕ ಅಧಿಕಾರಿ ಲಕ್ಷ್ಮಿ ಪುರಿ ಅವರು ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.ಉತ್ತರ ಪ್ರದೇಶದ ಸ್ಥಾನಕ್ಕೆ ರಾಜೀನಾಮೆ:ಹರ್ದೀಪ್ ಸಿಂಗ್ ಪುರಿ ಅವರು ಶನಿವಾರವಷ್ಟೇ ಉತ್ತರ ಪ್ರದೇಶದ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದಕ್ಕೂ ಕೆಲ ದಿನಗಳ ಮೊದಲು ಅಂದರೆ ನವೆಂಬರ್ 5 ರಂದು ಅವರು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಉತ್ತರ ಪ್ರದೇಶದಿಂದ ಅವರ ರಾಜ್ಯಸಭಾ ಅವಧಿಯು ಇದೇ ನವೆಂಬರ್ 25 ರಂದು ಮುಕ್ತಾಯಗೊಳ್ಳಲಿತ್ತು. ಇದೀಗ ಮಧ್ಯಪ್ರದೇಶದಿಂದ ಆಯ್ಕೆಯಾಗಿರುವ ಅವರ ನೂತನ ಅವಧಿಯು 2030ರ ಏಪ್ರಿಲ್ 2ರವರೆಗೆ ಇರಲಿದೆ.ಎಲ್. ಮುರುಗನ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನ:ಮಾಜಿ ಕೇಂದ್ರ ಸಚಿವ ಎಲ್. ಮುರುಗನ್ ಅವರು ಕಳೆದ ತಿಂಗಳು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಮಧ್ಯಪ್ರದೇಶದ ಈ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ಇದೀಗ ಹರ್ದೀಪ್ ಸಿಂಗ್ ಪುರಿ ಆಯ್ಕೆಯಾಗಿದ್ದಾರೆ.
ಸಂಬಂಧಿತ ಸುದ್ದಿಗಳು

ಬೇಲೂರು ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸುವ ನಿರ್ಧಾರಕ್ಕೆ ಕಾಫಿನಾಡಿನಲ್ಲಿ ತೀವ್ರ ಆಕ್ರೋಶ : ಉಗ್ರ ಹೋರಾಟದ ಎಚ್ಚರಿಕೆ
ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕಾಡಾನೆ ದಾಳಿಯಿಂದ ಸರಣಿ ಸಾವುಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿನ…
◷ 17/11/2026
ಬರ ನಿರ್ವಹಣಾ ಕ್ರಮ ಪರಿಣಾಮಕಾರಿಯಾಗಿ ಜಾರಿಗೊಳಿಸಿ : ಸಚಿವ ಈಶ್ವರ್ ಖಂಡ್ರೆ
ಬೀದರ್: ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳು ಸೇರಿದಂತೆ ಸಚಿವ ವಿವಿಧ ಇಲಾಖೆಗಳ ಹಿ…
◷ 17/11/2026
ಜ್ಞಾನ ಭಾರತ ಮಿಷನ್" ಕಾರ್ಯವೀಕ್ಷಣೆಗೆ ಕೇಂದ್ರ ತಂಡದ ಅಧಿಕಾರಿಗಳ ಮೈಸೂರು ಭೇಟಿ
ಮೈಸೂರು: ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾದ "ಜ್ಞಾನ ಭಾರತ ಮಿಷನ್" ಅಂಗವಾಗಿ ಭಾರತದಾದ್ಯಂತ ಹಸ್ತಪ್ರತಿಗಳ/ ತಾಳೆಗರಿಗಳ ಡಿಜಿಟಲೀಕರ…
◷ 17/11/2026
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ವಾಹನ ಶುಲ್ಕ ವಸೂಲಾತಿ ವಿರೋಧಿಸಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ
ಆಲಂಬಾಡಿ ಸುತ್ತಮುತ್ತಲಿನ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಲು ಆಗ್ರಹ
◷ 17/11/2026
