ನವದೆಹಲಿ : ಭಾರತೀಯ ನೌಕಾಪಡೆಯ ಕಡಲ ಬಲವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತೊಂದು ಸ್ವದೇಶಿ ಯುದ್ಧನೌಕೆ ಸೇರ್ಪಡೆಯಾಗಿದೆ. ರಕ್ಷಣಾ ಸಚಿವಾಲಯದ ಸಾರ್ವಜನಿಕ ವಲಯದ ಉದ್ದಿಮೆಯಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್ ಲಿಮಿಟೆಡ್ (GRSE) ಸೋಮವಾರ (ನವೆಂಬರ್ 23) ಜಲಾಂತರ್ಗಾಮಿ ನಿರೋಧಕ ಯುದ್ಧನೌಕೆ ‘ಆಶಂಕ್’ ಅನ್ನು ನೌಕಾಪಡೆಗೆ ಹಸ್ತಾಂತರಿಸಿದೆ. ಇದು ಜಿಆರ್‌ಎಸ್‌ಇ ನಿರ್ಮಿಸಿರುವ 120ನೇ ಯುದ್ಧನೌಕೆಯಾಗಿದೆ. ಕೇವಲ 18 ದಿನಗಳ ಅಂತರದಲ್ಲಿ ಜಿಆರ್‌ಎಸ್‌ಇ ನೌಕಾಪಡೆಗೆ ಹಸ್ತಾಂತರಿಸುತ್ತಿರುವ ಎರಡನೇ ಯುದ್ಧನೌಕೆ ಇದಾಗಿದ್ದು, ಇದಕ್ಕೂ ಮೊದಲು ನವೆಂಬರ್ 5ರಂದು ‘ಅಮಿನಿ’ ಯುದ್ಧನೌಕೆಯನ್ನು ನೀಡಲಾಗಿತ್ತು.ಪೂರ್ವ ನೌಕಾ ಕಮಾಂಡ್ ಪ್ರಧಾನ ಕಚೇರಿಯಲ್ಲಿ ಮುಖ್ಯ ಸಿಬ್ಬಂದಿ ಅಧಿಕಾರಿ (ತಾಂತ್ರಿಕ) ರಿಯರ್ ಅಡ್ಮಿರಲ್ ಗೌತಮ್ ಮರ್ವಾಹಾ ಅವರ ಸಮ್ಮುಖದಲ್ಲಿ ‘ಆಶಂಕ್’ ನೌಕೆಯನ್ನು ನೌಕಾಪಡೆಗೆ ಒಪ್ಪಿಸಲಾಯಿತು. ‘ಆಶಂಕ್’ ಎಂಬ ಹೆಸರಿಗೆ ‘ನಿರ್ಭೀತಿ’ ಅಥವಾ ‘ಅಂಜಿಕೆಯಿಲ್ಲದ’ ಎಂಬ ಅರ್ಥವಿದೆ. ತನ್ನ ಹೆಸರಿಗೆ ತಕ್ಕಂತೆ ಸಮುದ್ರದಲ್ಲಿ ಅವಿತು ಕುಳಿತಿರುವ ಶತ್ರು ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಿ, ಅವುಗಳನ್ನು ಎದುರಿಸಲು ಈ ನೌಕೆ ನೆರವಾಗಲಿದೆ. ಕರಾವಳಿ ಮತ್ತು ಕಡಿಮೆ ಆಳದ ಸಮುದ್ರ ಪ್ರದೇಶಗಳಲ್ಲಿ ಜಲಾಂತರ್ಗಾಮಿ ನಿರೋಧಕ ಕಾರ್ಯಾಚರಣೆಗಳಿಗಾಗಿಯೇ ಇದನ್ನು ವಿಶೇಷವಾಗಿ ರೂಪಿಸಲಾಗಿದ್ದು, ಕರಾವಳಿ ಭಾಗದಲ್ಲಿ ನೌಕಾಪಡೆಯ ನಿಗಾ ಮತ್ತು ಕಾರ್ಯಾಚರಣೆಯ ಸಾಮರ್ಥ್ಯವನ್ನು ಇದು ಬಲಪಡಿಸಲಿದೆ.‘ಆಶಂಕ್’ ನೌಕೆಯ ಪ್ರಮುಖ ವಿಶೇಷತೆಯೆಂದರೆ ಇದರ ಸ್ವದೇಶಿ ನಿರ್ಮಾಣ. ಇದರಲ್ಲಿ ಬಳಸಲಾದ ಸುಮಾರು ಶೇ. 88ರಷ್ಟು ಉಪಕರಣಗಳು ಮತ್ತು ವ್ಯವಸ್ಥೆಗಳನ್ನು ದೇಶದಲ್ಲೇ ತಯಾರಿಸಲಾಗಿದೆ. ಯುದ್ಧನೌಕೆಯಲ್ಲಿ ಅಳವಡಿಸಲಾಗಿರುವ 30 ಮಿಲಿಮೀಟರ್ ನೌಕಾ ಮೇಲ್ಮೈ ಫಿರಂಗಿಯನ್ನೂ ಜಿಆರ್‌ಎಸ್‌ಇ ಸಂಸ್ಥೆಯೇ ನಿರ್ಮಿಸಿದೆ. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ (ಆತ್ಮನಿರ್ಭರತೆ) ಮತ್ತು ದೇಶೀಯ ತಂತ್ರಜ್ಞಾನದ ಬೆಳವಣಿಗೆಗೆ ಈ ಯುದ್ಧನೌಕೆ ಉತ್ತಮ ನಿದರ್ಶನವಾಗಿದೆ. ಈ ನೌಕೆಯ ಹಸ್ತಾಂತರದೊಂದಿಗೆ ಜಿಆರ್‌ಎಸ್‌ಇ ಇದುವರೆಗೆ ಒಟ್ಟು 120 ಯುದ್ಧನೌಕೆಗಳನ್ನು ನಿರ್ಮಿಸಿದಂತಾಗಿದ್ದು, ಆ ಪೈಕಿ 82 ನೌಕೆಗಳನ್ನು ಭಾರತೀಯ ನೌಕಾಪಡೆಗೆ ನೀಡಲಾಗಿದೆ.