ಮೈಸೂರು : ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ. ರಘುಮೂರ್ತಿ ಅವರು  ಸರಗೂರು ಮತ್ತು ಎಚ್.ಡಿ. ಕೋಟೆ ತಾಲ್ಲೂಕು ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗದವರು ವಾಸಿಸುತ್ತಿರುವ ಹಾಡಿಗಳಿಗೆ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ / ಆಶ್ರಮ ಶಾಲೆಗಳಿಗೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಸ್ವೀಕರಿಸಿದರು.ಹಾಡಿಗಳ ಭೇಟಿಯ ಸಂದರ್ಭದಲ್ಲಿ ನಿವಾಸಿಗಳೊಂದಿಗೆ ಸಂವಾದ ನಡೆಸಿದ ಸಚಿವರು ಮಾತನಾಡಿ ಬುಡಕಟ್ಟು ಸಮುದಾಯದ ಹಿತರಕ್ಷಣೆ ಮತ್ತು ಸಮಗ್ರ ಅಭಿವೃದ್ಧಿ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದರು.  ಹಾಡಿಗಳಲ್ಲಿನ ರಸ್ತೆ, ಕುಡಿಯುವ ನೀರು, ವಸತಿ, ವಿದ್ಯುತ್ ಹಾಗೂ ಆರೋಗ್ಯ ಸೌಲಭ್ಯಗಳ ಸ್ಥಿತಿಗತಿ ಕುರಿತು ನಿವಾಸಿಗಳಿಂದ ಮಾಹಿತಿ ಪಡೆದರು. ಬುಡಕಟ್ಟು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡುವ ಅಗತ್ಯವನ್ನು ಒತ್ತಿ ಹೇಳಿದ ಸಚಿವರು, ಆಶ್ರಮ ಶಾಲೆಗಳು ಮತ್ತು ವಸತಿ ನಿಲಯಗಳಲ್ಲಿ ಗುಣಮಟ್ಟದ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಲು  ಅಧಿಕಾರಿಗಳಿಗೆ ಹೇಳಿದರು.ಹಾಡಿ ಜನರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಮತ್ತು ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಫಲ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕುಡಿಯುವ ನೀರಿನ ಸಮಸ್ಯೆ, ಬೋರ್‌ವೆಲ್‌ ಹಾಳಾದಾಗ ತಕ್ಷಣದ ಪರಿಹಾರ ಕ್ರಮಗಳು, ಸಾಮೂಹಿಕ ಬೋರ್‌ವೆಲ್‌ಗಳ ಅಗತ್ಯ ಹಾಗೂ ಅರಣ್ಯ ಪ್ರದೇಶದೊಳಗಿನ ಬೋರ್‌ವೆಲ್‌ಗಳಿಗೆ ವಿದ್ಯುತ್/ಸೌರಶಕ್ತಿ ಸಂಪರ್ಕ ಕಲ್ಪಿಸಬೇಕು ಎಂದರು.ಹಾಡಿಗಳಲ್ಲಿ ವಾಸಿಸುವ ಪರಿಶಿಷ್ಟ ಪಂಗಡದ ಜನರಿಗೆ ಸರ್ಕಾರದ ಸೌಲಭ್ಯಗಳು ಮತ್ತು ದಾಖಲೆಗಳು ಸುಲಭವಾಗಿ ತಲುಪಬೇಕು. ಅಧಿಕಾರಿಗಳು ನೆಪ ಹೇಳದೆ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಹೇಳಿದರು. ಯೋಜನೆಗಳು  ಜನರನ್ನು ತಲುಪಲು ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಹಕ್ಕುಪತ್ರ ಮತ್ತು ಪಹಣಿ  ಸಮಸ್ಯೆಗಳನ್ನು ಬಗೆಹರಿಸಿ, ಹಾಡಿಗಳ ಒಳಗಿನ ಕುಗ್ರಾಮಗಳಿಗೂ  ಸರ್ಕಾರದ ಸೌಲಭ್ಯಗಳು ತಲುಪುವಂತೆ ಕ್ರಮ ವಹಿಸಬೇಕು ಎಂದು  ಅಧಿಕಾರಿಗಳಿಗೆ ತಿಳಿಸಿದರು.ಈ ಸಂದರ್ಭದಲ್ಲಿ  ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ನಿರ್ದೇಶಕರು ಡಾ.ಅಶೋಕ್ ಡಿ.ಆರ್, ಜಂಟಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ರಾಜಕುಮಾರ್, ಸಹಾಯಕ ನಿರ್ದೇಶಕರು ಶ್ರೀನಿವಾಸ್, ಸಮಗ್ರ ಬುಡಕಟ್ಟು ಅಭಿವೃದ್ಧಿ  ಯೋಜನಾ ಸಮನ್ವಯಾಧಿಕಾರಿ ಭಾರತಿ ಸಿ. ಆರ್, ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.