ನೇಪಾಳದ ಪುನರ್ನಿರ್ಮಾಣಕ್ಕೆ ಭಾರತದ ಭರ್ಜರಿ ನೆರವು : 24,000 ಕೋಟಿ ನೇಪಾಳಿ ರೂಪಾಯಿ ಅಭಿವೃದ್ಧಿ ಪ್ಯಾಕೇಜ್ ಘೋಷಿಸಿದ ಪ್ರಧಾನಿ ಮೋದಿ

ನವದೆಹಲಿ : 'ನೆರೆಹೊರೆಯವರಿಗೆ ಮೊದಲ ಆದ್ಯತೆ' (Neighbourhood First) ನೀತಿ ಮತ್ತು ಅಚಲ ಸ್ನೇಹಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿ, ನೇಪಾಳದ ಪ್ರವಾಹೋತ್ತರ ಪುನರ್ನಿರ್ಮಾಣ ಹಾಗೂ ದೀರ್ಘಕಾಲೀನ ಅಭಿವೃದ್ಧಿಗಾಗಿ ಭಾರತವು 24,000 ಕೋಟಿ ನೇಪಾಳಿ ರೂಪಾಯಿಗಳ 'ಅಭಿವೃದ್ಧಿ ಸಹಕಾರ ಪ್ಯಾಕೇಜ್' ಅನ್ನು ಘೋಷಿಸಿದೆ. ಸೋಮವಾರ ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನೇಪಾಳದ ಪ್ರಧಾನಮಂತ್ರಿ ಬಾಲೇಂದ್ರ ಶಾ ಅವರೊಂದಿಗೆ ನಡೆದ ನಿಯೋಗ ಮಟ್ಟದ ಮಾತುಕತೆ ಹಾಗೂ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಮಹತ್ವದ ಘೋಷಣೆ ಮಾಡಿದರು.
ಸಂಕಷ್ಟದಲ್ಲಿ ನೇಪಾಳದ ಜೊತೆ ಭಾರತ ನಿಂತಿದೆ: ಪ್ರಧಾನಿ ಮೋದಿ
ಜಂಟಿ ಹೇಳಿಕೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಳೆದ ಆಗಸ್ಟ್‌ನಲ್ಲಿ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾದ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ಈ ಕಷ್ಟದ ಸಮಯದಲ್ಲಿ ಭಾರತವು ಕಠ್ಮಂಡುವಿನೊಂದಿಗೆ ದೃಢವಾಗಿ ನಿಂತಿದೆ ಎಂದು ಭರವಸೆ ನೀಡಿದರು. ಪ್ರವಾಹ ಪೀಡಿತ ಕುಟುಂಬಗಳ ಜೀವನವನ್ನು ಮತ್ತೆ ಹಳಿಗೆ ತರುವುದು, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಭವಿಷ್ಯದ ನೈಸರ್ಗಿಕ ವಿಕೋಪಗಳನ್ನು ಎದುರಿಸಲು ನೇಪಾಳದ ಸಾಮರ್ಥ್ಯವನ್ನು ಬಲಪಡಿಸುವುದು ಈ ಆರ್ಥಿಕ ಪ್ಯಾಕೇಜ್‌ನ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.ಮಾರ್ಚ್ 2026ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಎರಡು ದಿನಗಳ ಅಧಿಕೃತ ಭೇಟಿಗಾಗಿ ಭಾನುವಾರ ನವದೆಹಲಿಗೆ ಆಗಮಿಸಿದ ಬಾಲೇಂದ್ರ ಶಾ ಅವರನ್ನು ಸ್ವಾಗತಿಸಿದ ಮೋದಿ, ಅವರ ನಾಯಕತ್ವವನ್ನು ಶ್ಲಾಘಿಸಿದರು. "ಕೆಲವು ತಿಂಗಳುಗಳ ಹಿಂದೆ ವಿಶ್ವದ ಅತ್ಯಂತ ಕಿರಿಯ ಪ್ರಧಾನಿಯಾಗಿ ವಿಶ್ವಸಂಸ್ಥೆಯನ್ನು ಉದ್ದೇಶಿಸಿ ಮಾತನಾಡುವಾಗ ಶಾ ಅವರ ದೂರದೃಷ್ಟಿಯ ಸ್ಪಷ್ಟ ಝಲಕ್ ಕಂಡುಬಂದಿತ್ತು. ನೇಪಾಳದ ಜನತೆ ನೀಡಿರುವ ಐತಿಹಾಸಿಕ ಜನಾದೇಶವು ಅಲ್ಲಿನ ಹೊಸ ಪೀಳಿಗೆಯ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ" ಎಂದು ಮೋದಿ ಹೇಳಿದರು. ಉಭಯ ದೇಶಗಳ ಸಂಬಂಧವನ್ನು "ಆಪ್ತ ಬಾಂಧವ್ಯ ಮತ್ತು ಅಚಲ ನಂಬಿಕೆಯ" ತಳಹದಿಯ ಮೇಲೆ ನಿಂತಿದೆ ಎಂದು ಬಣ್ಣಿಸಿದ ಅವರು, ಭಾರತ ಮತ್ತು ನೇಪಾಳ ಸುಖ-ದುಃಖ ಹಾಗೂ ಪ್ರಗತಿಯ ನಿಜವಾದ ಪಾಲುದಾರರು ಎಂದರು.
ಸಂಬಂಧಿತ ಸುದ್ದಿಗಳು

ಪೊಲೀಸ್ ಅಧಿಕಾರಿಗಳಿಗೆ ಮಹತ್ವದ ನಿರ್ದೇಶನ ನೀಡಿದ ಸಿಎಂ
ಬೆಂಗಳೂರು : ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಹತ್ವದ ನಿರ್ದೇಶನಗಳನ್ನು ನೀಡಿದ್ದಾರೆ.ಠಾಣೆಗಳಲ್ಲಿ ರ…
◷ 23/11/2026
ನೇಪಾಳ ಪ್ರಧಾನಿ ಬಾಲೇಂದ್ರ ‘ಬಾಲೆನ್’ ಶಾ ಭಾರತಕ್ಕೆ
ನವದೆಹಲಿ : ನೇಪಾಳ ಪ್ರಧಾನಿ ಬಾಲೇಂದ್ರ ‘ಬಾಲೆನ್’ ಶಾ ಅವರು ಎರಡು ದಿನಗಳ ಭಾರತ ಭೇಟಿಯಲ್ಲಿದ್ದು, ಇಂದು ನಿಯೋಗ ಮಟ್ಟದ ಮಾತುಕತೆಯ ಜೊತ…
◷ 23/11/2026
ಡಿಸೆಂಬರ್ 12ಕ್ಕೆ ಗಂಗಾ ಜಲ ಒಪ್ಪಂದ ಅಂತ್ಯ: ಢಾಕಾದಲ್ಲಿ ಭಾರತ-ಬಾಂಗ್ಲಾದೇಶ ಮಹತ್ವದ ಸಭೆ
ನವದೆಹಲಿ : ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಹಂಚಿಕೆಯ ನದಿಗಳ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಭಾನುವಾರ) ಢಾಕಾದ…
◷ 22/11/2026
ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕುಡಿಯುವ ನೀರು, ವಿದ್ಯುತ್ ಪೂರೈಕೆ, ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ
ವಿಜಯಪುರ : ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ…
◷ 21/11/2026
