ರಾಮನಗರ :  ಅಸೂಯೆ ಪಟ್ಟುಕೊಳ್ಳುವುದರಲ್ಲಿ ಮತ್ತು ಸುಳ್ಳು ಹೇಳುವುದರಲ್ಲಿ  ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ  ಪದ್ಮಶ್ರೀ ಕೊಡಿಸಬೇಕು ಎಂದು ಬಮೂಲ್ ಅಧ್ಯಕ್ಷ ಮಾಜಿ ಸಂಸದ ಡಿ.ಕೆ.ಸುರೇಶ್   ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಮಾಗಡಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಟೀಕೆಗೆ ತಿರುಗೇಟು ನೀಡಿ ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳಲ್ಲ, ರೈತರಿಗೆ ಮತ್ತು ಹಿಂದುಳಿದವರಿಗೆ ಶಕ್ತಿ ತುಂಬುವುದೇ ನಿಜವಾದ ಅಭಿವೃದ್ಧಿ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ನಮ್ಮ ಸರ್ಕಾರ ಬಂದು ಮೂರೂವರೆ ವರ್ಷವಾಗಿದೆ. ಜಾತಿ, ಪಕ್ಷಕ್ಕೆ ಸೀಮಿತ ಮಾಡದೇ ಪ್ರತಿ ಕುಟುಂಬಕ್ಕೆ ಐದು ಗ್ಯಾರಂಟಿಗಳ ಮೂಲಕ ಸುಮಾರು 76 ಸಾವಿರ ರೂ. ತಲುಪಿಸಿದ್ದೇವೆ. ಸರ್ಕಾರ ದಿವಾಳಿಯಾಗಿಲ್ಲ, ಬದಲಾಗಿ ಪ್ರತಿಯೊಬ್ಬರ ಮನೆಯ ಜ್ಯೋತಿ ಬೆಳಗಿದೆ. ಹಿಂದೆ 15 ಲಕ್ಷ ರೂ. ಕೊಡುತ್ತೇವೆ ಎಂದವರು ಭರವಸೆ ಈಡೇರಿಸಿದರಾ ಎಂದು ಪ್ರಶ್ನಿಸಿದರು.ಹಿಂದೆ ಎಸ್.ಬಂಗಾರಪ್ಪ ಅವರು ರೈತರಿಗೆ ಉಚಿತ ವಿದ್ಯುತ್ ನೀಡಿದ್ದರು. ಈಗ ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕೆಪಿಎಸ್ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಸಚಿವ ಪುಟ್ಟರಂಗಶೆಟ್ಟಿ ಅವರ ಸಹಕಾರದಿಂದ ಹಾಲಿನ ದರ ಹೆಚ್ಚಿಸಿ ರೈತರಿಗೆ ಪ್ರತಿ ಲೀಟರ್‌ಗೆ 7 ರೂ. ಹೆಚ್ಚುವರಿ ಹಣ ನೀಡಲಾಗುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ವಿಸ್ಕಿ ಬೆಲೆ ಹೆಚ್ಚಾದಾಗ ಸುಮ್ಮನಿದ್ದವರು, ಈಗ ರೈತರಿಗೆ ಅನುಕೂಲ ಮಾಡಿಕೊಟ್ಟರೆ ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದರು.