ಬೆಂಗಳೂರು: ಬೆಂಗಳೂರಿನ ರಸ್ತೆಗುಂಡಿಗಳಿಂದ ವಾಹನಗಳ ಮೈಲೇಜ್ ಕಡಿಮೆ ಆಗುತ್ತಿದೆಯೇ ಹೊರತು ಎಥೆನಾಲ್  ಮಿಶ್ರಣದಿಂದಲ್ಲ  ಎಂದು ವಿಪಕ್ಷ ನಾಯಕ ಆರ್ .ಅಶೋಕ್   ಪ್ರತಿಪಾದಿಸಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಹನಗಳ ಮೈಲೇಜ್ ಎಥೆನಾಲ್‌ನಿಂದ ಕಮ್ಮಿ ಆಗಿಲ್ಲ. ರಸ್ತೆಗುಂಡಿಗಳಿಂದ ವಾಹನಗಳ ಮೈಲೇಜ್ ಕಡಿಮೆ ಆಗುತ್ತಿದೆ. ಹಿಂದೆ ಬೆಂಗಳೂರಿನಲ್ಲಿ ಮೈಲೇಜ್ ಸರಾಸರಿ 18 ಕಿ.ಮೀ ಇತ್ತು, ಈಗ ರಸ್ತೆಗಳ ಗುಂಡಿಗಳಿಂದ 11 ಕಿ.ಮೀಗೆ ಇಳಿದಿದೆ ಎಂದು ಹೊಸ ವಾದ ಮುಂದೆ ಇಟ್ಟರು. ರಾಜ್ಯದಲ್ಲಿ ದರ ಏರಿಕೆ ವಿರುದ್ಧ ಜನಾಕ್ರೋಶ ಇದೆ. ಆದರೆ ಇದನ್ನು ಡೈವರ್ಟ್ ಮಾಡಲು ಎಥೆನಾಲ್ ವಿಚಾರ ತಂದು ಡಿಕೆಶಿ ಟ್ರಿಕ್ಸ್ ಮಾಡಿದ್ದಾರೆ. ಬೇರೆ ರಾಜ್ಯಗಳಲ್ಲಿ ಇಲ್ಲದ ಸಮಸ್ಯೆ ಕರ್ನಾಟಕದಲ್ಲಷ್ಟೇ ಏಕಿದೆ? ಪರಿಸರ ಸ್ನೇಹಿ ಹಾಗೂ ರೈತ ಸ್ನೇಹಿ ಎಥೆನಾಲ್ ಅನ್ನು ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ವಿರೋಧಿಸುತ್ತಿದೆ. 1.60 ಲಕ್ಷ ಕೋಟಿಯಷ್ಟು ನೆರವು ಎಥೆನಾಲ್ ಮಿಶ್ರಣದಿಂದ ರೈತರಿಗೆ ಸಿಕ್ಕಿದೆ. ಎಥೆನಾಲ್ ಬಳಕೆಯಿಂದ ದೇಶದಲ್ಲಿ 350 ಟನ್ ಕಚ್ಚಾ ತೈಲ ಬಳಕೆ ಕಡಿಮೆ ಆಗಿದೆ ಎಂದು ತಿಳಿಸಿದರು.  ಎಥೆನಾಲ್ ಪರೀಕ್ಷೆ ವೇಳೆ ರಾಜ್ಯ ಸರ್ಕಾರ ನಿಯಮ ಪಾಲನೆ ಮಾಡಿಲ್ಲ.1 ಲೀಟರ್ ನಲ್ಲಿ ಆರು ಸ್ಯಾಂಪಲ್ ಸಂಗ್ರಹ ಮಾಡಬೇಕು. ಪೆಟ್ರೋಲ್ ಬಂಕ್ ಮಾಲೀಕ, ತೈಲ ಕಂಪೆನಿ ಹಾಗೂ ಲ್ಯಾಬ್‌ಗೆ ಒಂದೊಂದು ಸ್ಯಾಂಪಲ್ ಕೊಡಬೇಕು. ಈ ನಿಯಮ ರಾಜ್ಯದಿಂದ ಪಾಲನೆ ಆಗಿಲ್ಲ. ಕೇಂದ್ರ ಸಚಿವರ ಬಳಿಯೂ ಹೋಗಿ ದೂರು ಕೊಟ್ಟಿಲ್ಲ. ಎಥೆನಾಲ್ ಬಳಕೆ ಪ್ರೋತ್ಸಾಹದಿಂದಲೇ ರಾಜ್ಯಕ್ಕೆ ಇದುವರೆಗೆ 10 ಸಾವಿರ ಕೋಟಿ ಅನುದಾನ ಬಂದಿದೆ. ಎಥೆನಾಲ್ ಬೇಡ ಅಂದ್ರೆ  ಕೇಂದ್ರಕ್ಕೆ ಈ ಹಣ ವಾಪಸ್ ಕೊಡಲಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲೆಸೆದರು.