ಗುಂಡ್ಲುಪೇಟೆ : ವಾಯುಮಾಲಿನ್ಯ ತಡೆಗಟ್ಟಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಗುಂಡ್ಲುಪೇಟೆ ಘಟಕದ ಕೆಲ ಬಸ್‌ಗಳು ಅಪಾರ ಪ್ರಮಾಣದಲ್ಲಿ ಕಪ್ಪು ಹೊಗೆ ಉಗುಳುತ್ತಾ ಸಂಚರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಖಾಸಗಿ ವಾಹನಗಳ ತಪಾಸಣೆ ನಡೆಸುವ ಸಾರಿಗೆ ಇಲಾಖೆ ಅಧಿಕಾರಿಗಳು ವಾಯುಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಇಲ್ಲದಿದ್ದರೆ ವಾಹನ ಚಾಲಕರಿಗೆ ಭಾರೀ ದಂಡ ವಿಧಿಸುತ್ತಾರೆ. ಆದರೆ, ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾಗುವಂತೆ ಹೊಗೆ ಉಗುಳುತ್ತಾ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್‌ಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬಂದಿದೆ.ಗುಂಡ್ಲುಪೇಟೆ-ಬಾಚಹಳ್ಳಿ ಮಾರ್ಗದಲ್ಲಿ ಸಂಚರಿಸುವ ಕೆಎ-10 ಎಫ್-0321 ನೋಂದಣಿ ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್ ವಿಪರೀತ ಕಪ್ಪು ಹೊಗೆ ಉಗುಳುತ್ತಿದ್ದು, ಹಿಂಬದಿಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರು ಹೊಗೆಯಿಂದಾಗಿ ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಪ್ರಯಾಣಿಕರಿಂದ ಟಿಕೆಟ್ ದರ ಹೆಚ್ಚಳ ಮಾಡುವ ಸಾರಿಗೆ ಸಂಸ್ಥೆ, ಅದೇ ರೀತಿ ಬಸ್‌ಗಳ ನಿರ್ವಹಣೆಗೂ ಹೆಚ್ಚಿನ ಆದ್ಯತೆ ನೀಡಬೇಕು. ಹಳೆಯ ಹಾಗೂ ಹೊಗೆ ಉಗುಳುವ ಬಸ್‌ಗಳನ್ನು ತಕ್ಷಣ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಹಾಗೂ ಇತರೆ ವಾಹನ ಸವಾರರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ದ್ವಿಚಕ್ರ ವಾಹನ ಸವಾರ ಮಹೇಶ್ ಒತ್ತಾಯಿಸಿದ್ದಾರೆ.