ಬೆಂಗಳೂರು : ಕೇಂದ್ರ ಸರ್ಕಾರವಾಗಲೀ ಅಥವಾ ರಾಜ್ಯ ಸರ್ಕಾರವಾಗಲೀ, ಪ್ರಧಾನಿ ಮೋದಿ ಅವರಾಗಲೀ ಅಥವಾ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಾಗಲೀ ಯಾರೂ ತಮ್ಮ ಜೇಬಿನಿಂದ ಹಣ ಖರ್ಚು ಮಾಡುವುದಿಲ್ಲ. ಎಲ್ಲರೂ ಖರ್ಚು ಮಾಡುವುದು ಜನರ ತೆರಿಗೆ ಹಣವನ್ನೇ ಎಂದು ತೇಜಸ್ವಿ ಸೂರ್ಯ ಹೇಳಿದರು.ನಮ್ಮ ಮೆಟ್ರೋ ಯೋಜನೆಯ ಅನುದಾನ ಹಂಚಿಕೆ, ಸಾಲ ಮರುಪಾವತಿ ಹಾಗೂ ರೆಡ್ ಲೈನ್ ಯೋಜನೆಯ ವಿಳಂಬಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ವಾಗ್ದಾಳಿ ನಡೆಸಿದರು.ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೆಟ್ರೋ ಅನುದಾನದ ಕುರಿತು ರಾಜ್ಯ ಸರ್ಕಾರ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ ಮತ್ತು ಕ್ರೆಡಿಟ್ ಪಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ಗ್ಯಾರಂಟಿ ಮೇಲೆ ವಿದೇಶಿ ಸಂಸ್ಥೆಗಳು ನೀಡುವ 29 ಸಾವಿರ ಕೋಟಿ ರೂ. ಸಾಲದ ಮೊತ್ತವನ್ನು ರಾಜ್ಯ ಸರ್ಕಾರ ತನ್ನ ಖಾತೆಗೆ ಸೇರಿಸಿಕೊಂಡು, ತಮ್ಮ ಪಾಲು ಹೆಚ್ಚಿದೆ ಎಂದು ಸುಳ್ಳು ಹೇಳುತ್ತಿದೆ. ಆ ಸಾಲವನ್ನು ಬಿಎಂಆರ್‌ಸಿಎಲ್ (BMRCL) ಸಂಸ್ಥೆಯೇ ಮರುಪಾವತಿಸುತ್ತದೆಯೇ ಹೊರತು ರಾಜ್ಯ ಸರ್ಕಾರವಲ್ಲ ಎಂದು ಅವರು ಸ್ಪಷ್ಟಪಡಿಸಿದರು.ನಮ್ಮ ಮೆಟ್ರೋ ಯೋಜನೆಯು 50:50 ಇಕ್ವಿಟಿ ಶೇರ್ ಒಪ್ಪಂದದಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಮಾಲೀಕತ್ವದಲ್ಲಿದೆ. ಈ ಒಪ್ಪಂದದ ಪ್ರಕಾರ ಆರಂಭಿಕವಾಗಿ ಎರಡೂ ಸರ್ಕಾರಗಳು ತಲಾ 9164 ಕೋಟಿ ರೂ. ಹೂಡಿಕೆ ಮಾಡಿವೆ. ಒಪ್ಪಂದದ ನಿಯಮದಂತೆ ಭೂಸ್ವಾಧೀನ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗಿದ್ದು, ಆ ಆಧಾರದ ಮೇಲೆ ರಾಜ್ಯ ಸರ್ಕಾರ 19 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ ಎಂದು  ವಿವರಿಸಿದರು. ಕೇಂದ್ರ ಸರ್ಕಾರ ಕೊಡಿಸಿರುವ ಸಾಲವೂ ಸೇರಿದಂತೆ ಕೇಂದ್ರದ ಪಾಲು 41,558 ಕೋಟಿ (53.35%) ಆಗಿದ್ದರೆ, ರಾಜ್ಯ ಸರ್ಕಾರದ ಪಾಲು 36,333 ಕೋಟಿ (46.65%) ಮಾತ್ರ ಆಗಿದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದೆ. ಕೇಂದ್ರ ಸರ್ಕಾರ ಕೇವಲ ಶೇ.16ರಷ್ಟು ಮಾತ್ರ ಹಣ ನೀಡುತ್ತಿದೆ ಎನ್ನುವುದಾದರೆ, ಆ ಹಣವನ್ನು ಬಿಟ್ಟು ನೀವೇ ಯೋಜನೆ ಮಾಡಿ ತೋರಿಸಿ ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.ಮೆಟ್ರೋ ರೆಡ್ ಲೈನ್ ಯೋಜನೆ ವಿಳಂಬವಾಗಲು ರಾಜ್ಯ ಸರ್ಕಾರದ ಸುರಂಗ ಮಾರ್ಗ  ಯೋಜನೆಯೇ ಕಾರಣ ಎಂದು ಸಂಸದರು ದೂರಿದರು. ಮೆಟ್ರೋ ಪ್ರಸ್ತಾವಿತ ಮಾರ್ಗದಲ್ಲೇ ಟನಲ್ ರೋಡ್ ಬರುತ್ತಿದ್ದು, ಇದರ ಜೊತೆಗೆ ಮೆಟ್ರೋ ನಿಲ್ದಾಣಗಳ ಉದ್ದವನ್ನು   ಕಡಿಮೆ ಮಾಡಿ ಪ್ರಸ್ತಾವನೆ ಕಳುಹಿಸಲಾಗಿದೆ.ರಾಜ್ಯ ಸರ್ಕಾರದ ಅವೈಜ್ಞಾನಿಕ ಸುರಂಗ ಮತ್ತು ಮೇಲ್ಸೇತುವೆ ಪ್ರಸ್ತಾವನೆಗಳಿಂದಾಗಿ ನಮ್ಮ ಮೆಟ್ರೋ ಹಂತ 3ಎ (ಆರೆಂಜ್ ಲೈನ್) ಯೋಜನೆ ವಿಳಂಬವಾಗಿದೆ. ರಾಜ್ಯ ಸರ್ಕಾರ ಈ ಯೋಜನೆಗೆ 28,405 ಕೋಟಿ ರೂ. ಅಂದಾಜು ವೆಚ್ಚ ಪ್ರಸ್ತಾಪಿಸಿ ಸಮಗ್ರ ಯೋಜನಾ ವರದಿ(DPR) ಕಳುಹಿಸಿತ್ತು. ಆದರೆ ಕೇಂದ್ರ ಸರ್ಕಾರದ ನೇತೃತ್ವದ ಪರಿಶೀಲನಾ ಸಮಿತಿಯು ಇದನ್ನು 25,999 ಕೋಟಿ ರೂ.ಗೆ ಇಳಿಸಿದ್ದು, ಇದರಿಂದ ತೆರಿಗೆದಾರರ 2,406 ಕೋಟಿ ರೂ. ಹಣ ಉಳಿತಾಯವಾಗಲಿದೆ ಎಂದು   ತಿಳಿಸಿದ್ದಾರೆ.