ಉಡುಪಿ:  ಕೊಂಕಣ ಪ್ರದೇಶ ಹಾಗೂ ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಹೆಚ್ಚಿನ ಆದ್ಯತೆ ನೀಡಿದ್ದು, ಈ ಭಾಗದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರಕಾರದಿಂದ ಅನುಮೋದನೆ ದೊರೆಯುತ್ತಿದೆ ಎಂದು ಕೇಂದ್ರ ರೈಲ್ವೇ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.ಶುಕ್ರವಾರ ಉಡುಪಿ ಅಜ್ಜರಕಾಡು ಆಕಾಶವಾಣಿ ಕೇಂದ್ರದಲ್ಲಿ 101.9 ಮೆಗಾಹರ್ಟ್ಸ್, 1 ಕಿಲೋವ್ಯಾಟ್ ಸಾಮರ್ಥ್ಯದ ಎಫ್‌ಎಂ ಪ್ರೇಷಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಫಲಕ ಅನಾವರಣಗೊಳಿಸಿ, ರಿಬ್ಬನ್ ಕತ್ತರಿಸುವ ಮೂಲಕ ನೂತನ ಎಫ್‌ಎಂ ಟ್ರಾನ್ಸ್‌ಮಿಟರ್ ಉದ್ಘಾಟಿಸಿದ ಸಚಿವರು, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿದರು.   ಕೊಂಕಣ ರೈಲ್ವೆಯ ಎಲ್ಲಾ ಹಳಿಗಳನ್ನು ಡಬ್ಲಿಂಗ್ ಮಾಡುವುದು ನನ್ನ ಮಿಷನ್ ಆಗಿದ್ದು, ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುವುದು. ಕೊಂಕಣ ರೈಲ್ವೇಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಈಗಾಗಲೇ 10 ರೈಲ್ವೇ ಮೇಲ್ವೇತುವೆಗಳು ಹಾಗೂ ಎರಡು ಸುರಂಗಗಳ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಈ ಭಾಗದ ರೈಲ್ವೇ ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು  ಹೇಳಿದರು.ಉಡುಪಿ ಇಂದ್ರಾಳಿ ರೈಲು ನಿಲ್ದಾಣ ಜಿಲ್ಲೆಯ ಪ್ರಮುಖ ನಿಲ್ದಾಣವಾಗಿದ್ದು, ಅದನ್ನು ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹೊಸ ಪ್ಲಾಟ್‌ಫಾರ್ಮ್ ನಿರ್ಮಿಸುವುದರಿಂದ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆಯೇ ಎಂಬ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳ ತಂಡಕ್ಕೆ ಸೂಚಿಸಲಾಗಿದೆ. ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ರೈಲು ಸೇವೆಗಳ ಬಳಕೆಯನ್ನೂ ಹೆಚ್ಚಿಸಬೇಕಿದೆ. ಸ್ಥಳೀಯ ವಾಸ್ತುಶೈಲಿಗೆ ಆದ್ಯತೆ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಯೂಟ್ಯೂಬ್ ಚಾನೆಲ್‌ಗಳ ಕಂಟೆಂಟ್‌ಗೆ ಅವರೇ ಹೊಣೆಯೂಟ್ಯೂಬ್ ಹಾಗೂ ಇತರ ವೆಬ್ ಚಾನೆಲ್‌ಗಳ ನಿಯಂತ್ರಣದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಯೂಟ್ಯೂಬ್ ಚಾನೆಲ್‌ಗಳು ತಾವು ಪ್ರಕಟಿಸುವ ಕಂಟೆಂಟ್‌ಗಳಿಗೆ ತಾವೇ ಜವಾಬ್ದಾರರಾಗಿರಬೇಕು ಎಂದು ಮಾಧ್ಯಮಗಳಿಗೆ ತಿಳಿಸಿದರು.