ಮೈಸೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಸರಿಯಾಗಿ ತಲುಪುತ್ತಿದೆಯೋ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅಕ್ರಮಗಳನ್ನು ತಡೆಯಲು ಮನೆ ಮನೆಗೆ ಸಮೀಕ್ಷೆ ನಡೆಸಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷರಾದ ಪುಷ್ಪವಲ್ಲಿ ಅವರು ಹೇಳಿದ್ದರು.ಇಂದು ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿಯಲ್ಲಿ  ಗುರುವಾರ ಪಂಚ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿಯೂ ಕೆಲವರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂಬ ದೂರುಗಳು ಸರ್ಕಾರದ ಗಮನಕ್ಕೆ ಬಂದಿವೆ. ಇದನ್ನು ತಡೆಯಲು ಅಧಿಕಾರಿಗಳು ಹಾಗೂ ಆರಾರು ಜನ ಗ್ಯಾರಂಟಿ ಸಮಿತಿ ಸದಸ್ಯರು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಿದ್ದಾರೆ. ಈ ಸಮೀಕ್ಷೆಯಲ್ಲಿ ಬಿಪಿಎಲ್  ಕುಟುಂಬಗಳು ಮಾತ್ರ ಸೌಲಭ್ಯ ಪಡೆಯುತ್ತಿವೆಯೇ ಅಥವಾ ಬೇರೆಯವರು ಪಡೆದುಕೊಳ್ಳುತ್ತಿದ್ದಾರೆಯೇ ಎಂಬುದನ್ನು  ಪತ್ತೆ ಹಚ್ಚಲಾಗುತ್ತದೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ CDPO ಅಧಿಕಾರಿಯಾದ ಅಭಿಕುಮಾರ್ ಮಾತನಾಡಿ ಗೃಹಲಕ್ಷ್ಮಿ ಅನುದಾನ ಬಿಡುಗಡೆಯು ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್  ಈ ಮೂರು ತಿಂಗಳ  ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಲಾಗಿದ್ದು ಒಟ್ಟು 6,61,846 ಫಲಾನುಭವಿಗಳಿಗೆ ಮೂರು ತಿಂಗಳ ಹಣ ಪಾವತಿ ಮಾಡಲಾಗಿದೆ ಎಂದರು. ಗೃಹ ಲಕ್ಷ್ಮಿ ಯೋಜನೆಯಡಿ ಆಗಸ್ಟ್ ತಿಂಗಳಲ್ಲಿ ಸುಮಾರು 20 ಫಲಾನುಭವಿಗಳು ಮೃತಪಟ್ಟಿದ್ದು ಹಣವನ್ನು ತಕ್ಷಣವೇ ತಡೆಯಲಾಗಿದೆ.  ಸೆಪ್ಟೆಂಬರ್ ತಿಂಗಳಲ್ಲಿ 21 ಮೃತ ಫಲಾನುಭವಿಗಳ  ಹಣವನ್ನು ತಡೆಯಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಮೃತಪಟ್ಟ 6 ಫಲಾನುಭವಿಗಳ ಹಣವನ್ನು ಸ್ಥಗಿತಗೊಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.ಜನರಲ್ ಪೋಸ್ಟ್ ಆಫೀಸ್ ಮತ್ತು ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಮೂಲಕ ಮರಣದ ನಂತರ ಸುಮಾರು ರೂ 9,38,000 ಪಾವತಿಯಾಗಿದ್ದು, ಇದರಲ್ಲಿ 3,20,000 ಫ್ರೀಜ್ ಆಗಿರುತ್ತದೆ ಮತ್ತು ಸರ್ಕಾರದ ಖಾತೆಗೆ 4,22,000 ಜಮೆಯಾಗಿದೆ. ಕುಟುಂಬದ ಸದಸ್ಯರು ಎಟಿಎಂ ಮೂಲಕ ಡ್ರಾ ಮಾಡಿಕೊಂಡಿರುವ ಮೊತ್ತ 4,49,000. ಒಟ್ಟು 24 ಬ್ಯಾಂಕ್‌ಗಳಲ್ಲಿ ಪ್ರಮುಖವಾಗಿ ಎಸ್‌ ಬಿಐ ಮತ್ತು ಕೆನರಾ ಬ್ಯಾಂಕ್‌ಗಳಲ್ಲಿ ಸುಮಾರು 18,87,000  ಹಣ ಬಾಕಿ ಉಳಿದಿದೆ ಎಂದರು.ಕೆ ಎಸ್ ಆರ್ ಟಿ ಸಿ ಅಧಿಕಾರಿಯಾದ ಕಲಾಶ್ರೀ ಮಾತನಾಡಿ ಶಕ್ತಿ ಯೋಜನೆ ಅಡಿ ಮೈಸೂರು ನಗರದಲ್ಲಿ  ಉಚಿತ ಟಿಕೆಟ್ ಪಡೆದು 30,31,43,357 ಪ್ರಯಾಣಿಸಿದ್ದು, ಇದರಿಂದ ಬಂದಿರುವ ಒಟ್ಟು ಆದಾಯ 4,87,35,26,531  ರೂಪಾಯಿಗಳು ಆಗಿರುತ್ತದೆ. ಇದು 2023 ರಿಂದ ಇಲ್ಲಿಯವರೆಗೆ ಕೇವಲ ಮೈಸೂರು ಸಿಟಿಯ ಅಂಕಿ-ಅಂಶದ ಮಾಹಿತಿ ಎಂದು ಹೇಳಿದರು.ಬಾಡಿಗೆದಾರರು ಮನೆ ಖಾಲಿ ಮಾಡಿ ಬೇರೆಡೆಗೆ ಸ್ಥಳಾಂತರಗೊಂಡಿರುವುದರಿಂದ ಹಳೆಯ ಐಡಿ  ರದ್ದಾಗದೆ ಹೊಸ ಕಡೆ ಸೌಲಭ್ಯ ಪಡೆಯಲು ತಾಂತ್ರಿಕ ತೊಡಕಾಗುತ್ತಿದೆ. ಹೊಸದಾಗಿ ಬಂದ ಬಾಡಿಗೆದಾರರಿಗೆ ಸೌಲಭ್ಯ ಕಲ್ಪಿಸುವ ಬಗ್ಗೆ ಸರ್ಕಾರದ ಮುಂದಿನ ನಿರ್ದೇಶದಂತೆ ಕೆಲಸ ಮಾಡಲಾಗುವುದು ಎಂದು ಹೇಳಿದರು.ಕೌಶಲ್ಯ ಅಭಿವೃದ್ಧಿ ತರಬೇತಿಯ ಸಹಾಯಕ ನಿರ್ದೇಶಕ ಮಂಜುನಾಥ್ ಟಿ ಡಿ ಅವರು ಮಾತನಾಡಿ ಯುವನಿಧಿ ಹಾಗೂ ಕೌಶಲ್ಯ ಅಭಿವೃದ್ಧಿ ಯೋಜನೆಗಳಡಿ   ಒಟ್ಟು 7681 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ 13  ಜನರಿಗೆ ಉದ್ಯೋಗ ದೊರೆತಿದೆ. ಆಯ್ಕೆಯಾದವರಲ್ಲಿ ಪದವೀಧರರು 6836  ಹಾಗೂ ಡಿಪ್ಲೊಮಾ ಮುಗಿಸಿದವರು 113 ಜನ ಇದ್ದಾರೆ. ಒಟ್ಟು 6949 ಅಭ್ಯರ್ಥಿಗಳಿಗೆ ಆಗಸ್ಟ್ ತಿಂಗಳಲ್ಲಿ ಡಿ.ಬಿ .ಟಿ. ಮೂಲಕ ಜಮೆಯಾಗಿದೆ. ಇಲ್ಲಿಯವರೆಗೆ (ಆಗಸ್ಟ್ ಅಂತ್ಯದವರೆಗೆ)  ಒಟ್ಟು ರೂ. 18,36,81,000  ಹಾಗೂ ಡಿಪ್ಲೊಮಾದಾರರಿಗೆ ರೂ. 14,37,೦೦೦ ಸೇರಿ ಒಟ್ಟು ರೂ. 18,51,18,೦೦೦ ಗಳ ಮೊತ್ತವನ್ನು ಡಿ.ಬಿ.ಟಿ. ಮೂಲಕ ನೀಡಲಾಗಿದೆ ಎಂದು ಹೇಳಿದರು.ಸಭೆಯಲ್ಲಿ ಗ್ಯಾರಂಟಿ ಯೋಜನೆಯ ಸಮಿತಿಯ ಉಪಾಧ್ಯಕ್ಷ  ಆರ್. ಗಿರೀಶ್, ಸುಶೀಲಾ,ವಿನಯ್ ,ಮಹಾದೇವ ಮತ್ತಿತರರು ಉಪಸ್ಥಿತರಿದ್ದರು.