ಬೆಂಗಳೂರು :  ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ ಮತ್ತು ರೌಡಿತನದ  ಪರಮಾವಧಿಯಾಗಿದೆ. ಅಧಿಕಾರದ ಮದದಿಂದ ಮೆರೆಯುತ್ತಿರುವ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಈ ದೌರ್ಜನ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. 2028ರ ಚುನಾವಣೆಯಲ್ಲಿ ಈ ಎಲ್ಲಾ ದಬ್ಬಾಳಿಕೆ ಹಾಗೂ ದೌರ್ಜನ್ಯಗಳಿಗೆ ಜನರು ಖಂಡಿತವಾಗಿಯೂ ತಕ್ಕ ಬುದ್ಧಿ ಕಲಿಸಲಿದ್ದಾರೆ ಎಂದು ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.ನಿಖಿಲ್ ಕುಮಾರಸ್ವಾಮಿಯವರಿಗೆ ದೇಗುಲ ಪ್ರವೇಶ ನಿರಾಕರಣೆ ಘಟನೆಗೆ ಸಂಬಂಧಿಸಿದಂತೆ ಹೆಚ್.ಡಿ.ಕುಮಾರಸ್ವಾಮಿ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಘಟನೆಯು ರಾಜಕೀಯ ಬದಲಾವಣೆಗೆ ನಾಂದಿ ಹಾಡಲಿದೆ ಎಂದು ಹೇಳಿದ್ದಾರೆ. ರಾಮನಗರ ಜಿಲ್ಲೆಯ ದೊಡ್ಡ ಕುರುಬರಹಳ್ಳಿ ಗ್ರಾಮದ ದೇವಾಲಯ ಉದ್ಘಾಟನೆಗೆ ನಿಖಿಲ್ ಕುಮಾರಸ್ವಾಮಿಯವರನ್ನು ಆಹ್ವಾನಿಸಲಾಗಿತ್ತು. ಆದರೆ, ಅವರಿಗೆ ದೇವಾಲಯ ಪ್ರವೇಶಕ್ಕೆ ತಡೆಯೊಡ್ಡಲಾಗಿದೆ. ಈ ಗ್ರಾಮವು ತಮಗೆ ಮೊದಲಿನಿಂದಲೂ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡುತ್ತಿದ್ದು, ಚೀಲೂರು ಪಂಚಾಯಿತಿಗೆ ಸೇರಿದೆ ಎಂದು  ವಿವರಿಸಿದರು. ತಮ್ಮ ಚುನಾವಣಾ ಸಂದರ್ಭಗಳಲ್ಲಿ ಈ ಗ್ರಾಮದ ಜನರು ನಿರಂತರವಾಗಿ ಬಹುಮತ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ತಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುವುದು ಮತ್ತು ಜನತಾದಳ ಬೆಂಬಲಿಗರನ್ನು ಭಯಭೀತಗೊಳಿಸುವುದು ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಈ ಘಟನೆ ಕಾಂಗ್ರೆಸ್ ಕಾರ್ಯಕರ್ತರ ರೌಡಿತನಕ್ಕೆ ಉದಾಹರಣೆ ಎಂದು ಅವರು ಬಣ್ಣಿಸಿದರು. ಮೈಸೂರಿನಲ್ಲಿ ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಗಳ ಬಗ್ಗೆಯೂ ಗಮನ ಸೆಳೆದ ಅವರು, ಮಾತಿಗೂ ಕೃತಿಗೂ ಇರುವ ವ್ಯತ್ಯಾಸವನ್ನು ಕಾಯ್ದು ನೋಡೋಣ ಎಂದಿದ್ದಾರೆ. ರಾಮನಗರದ ಜನತೆ ಮುಂದೆ ಕಾಂಗ್ರೆಸ್‌ಗೆ ಬುದ್ಧಿ ಕಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.