ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಕೇವಲ ಆರ್ಥಿಕ ಗುರಿಯಲ್ಲ, ಕಾರ್ಯತಂತ್ರದ ಅಗತ್ಯ : ರಕ್ಷಣಾ ಸಚಿವ ರಾಜನಾಥ್ ಸಿಂಗ್

ನವದೆಹಲಿ: ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ (ಆತ್ಮನಿರ್ಭರತೆ) ಎಂಬುದು ಕೇವಲ ಆರ್ಥಿಕ ಗುರಿಯಷ್ಟೇ ಅಲ್ಲ, ಬದಲಿಗೆ ದೇಶದ ಪ್ರಮುಖ ಕಾರ್ಯತಂತ್ರದ (Strategic) ಅಗತ್ಯತೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. 'ವಿನಾಶಕಾರಿಯಲ್ಲದ ಮೌಲ್ಯಮಾಪನ ಮತ್ತು ಸಹಾಯಕ ತಂತ್ರಜ್ಞಾನಗಳು' (Non-Destructive Evaluation and Allied Technologies) ಕುರಿತ 36ನೇ ವಾರ್ಷಿಕ ಸಮ್ಮೇಳನ ಹಾಗೂ ಏರೋಸ್ಪೇಸ್ ಕ್ಷೇತ್ರಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ವಿಚಾರಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ದೇಶವು ಇಂದು ಕ್ಷಿಪಣಿ ಅಭಿವೃದ್ಧಿ, ನೌಕಾ ಪ್ಲಾಟ್ಫಾರ್ಮ್ಗಳು, ಏರೋಸ್ಪೇಸ್ ಇಂಜಿನಿಯರಿಂಗ್, ರಾಡಾರ್ ವ್ಯವಸ್ಥೆಗಳು ಮತ್ತು ಬಾಹ್ಯಾಕಾಶ ಅನ್ವಯಿಕೆಗಳ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ ಎಂದು ರಾಜನಾಥ್ ಸಿಂಗ್ ಶ್ಲಾಘಿಸಿದರು. ಈ ಎಲ್ಲಾ ಸಾಧನೆಗಳು ನಮ್ಮ ವಿಜ್ಞಾನಿಗಳು, ಇಂಜಿನಿಯರ್ಗಳು, ಉತ್ಪಾದನಾ ಸಂಸ್ಥೆಗಳು ಹಾಗೂ ಉದ್ಯಮ ಕ್ಷೇತ್ರದ ಹೆಚ್ಚುತ್ತಿರುವ ತಾಂತ್ರಿಕ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತವೆ ಎಂದರು.ರಕ್ಷಣಾ ವ್ಯವಸ್ಥೆಯಲ್ಲಿ ಅತ್ಯಾಧುನಿಕ ಹಾಗೂ ಸಂಕೀರ್ಣ ಉಪಕರಣಗಳು ಸೇರ್ಪಡೆಯಾಗುತ್ತಿರುವುದರಿಂದ ಅವುಗಳ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ನಿರ್ಣಾಯಕವಾಗಿದೆ. ಯಾವುದೇ ದೇಶದ ಪ್ರಗತಿಯು ಕೇವಲ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿರದೆ, ಆ ತಂತ್ರಜ್ಞಾನದಿಂದ ತಯಾರಾದ ಉತ್ಪನ್ನಗಳು ಎಷ್ಟು ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ತಿಳಿಸಿದರು. ರಕ್ಷಣೆಯಂತಹ ಸೂಕ್ಷ್ಮ ಕ್ಷೇತ್ರಗಳಲ್ಲಿ ಯಾವುದೇ ಸಣ್ಣ ಲೋಪವೂ ಗಂಭೀರ ಪರಿಣಾಮಗಳಿಗೆ ಎಡೆಮಾಡಿಕೊಡಬಲ್ಲದು ಎಂದರು.ವಸ್ತುಗಳು ಅಥವಾ ಬಿಡಿಭಾಗಗಳಿಗೆ ಯಾವುದೇ ಹಾನಿ ಮಾಡದೆ ಅವುಗಳ ಆಂತರಿಕ ಸ್ಥಿತಿ ಮತ್ತು ಬಲವನ್ನು ಪರೀಕ್ಷಿಸಲು 'ವಿನಾಶಕಾರಿಯಲ್ಲದ ಪರೀಕ್ಷೆ ಮತ್ತು ಮೌಲ್ಯಮಾಪನ' (NDE) ತಂತ್ರಜ್ಞಾನಗಳು ಬಹಳ ಮುಖ್ಯವಾದ ಪಾತ್ರ ವಹಿಸುತ್ತವೆ ಎಂದು ಸಚಿವರು ಅಭಿಪ್ರಾಯಪಟ್ಟರು. ಉತ್ಪಾದನಾ ಹಂತದಲ್ಲೇ ಸಂಭಾವ್ಯ ದೋಷಗಳನ್ನು ಮುಂಚಿತವಾಗಿ ಗುರುತಿಸಲು ಇವು ಸಹಕಾರಿಯಗಿವೆ.ಕೇವಲ ದೋಷಗಳನ್ನು ಪತ್ತೆಹಚ್ಚುವುದಷ್ಟೇ ಅಲ್ಲ, ದೋಷಗಳೇ ಸೃಷ್ಟಿಯಾಗದಂತಹ ಕಾರ್ಯಸಂಸ್ಕೃತಿಯನ್ನು ನಿರ್ಮಿಸಬೇಕಿದೆ ಎಂದು ಅವರು ಕರೆ ನೀಡಿದರು. ಕೃತಕ ಬುದ್ಧಿಮತ್ತೆ (AI), ಯಂತ್ರ ಕಲಿಕೆ (Machine Learning), ರೋಬೋಟಿಕ್ಸ್, ಡಿಜಿಟಲ್ ಟ್ವಿನ್ ಮತ್ತು ಮುನ್ಸೂಚಕ ವಿಶ್ಲೇಷಣೆಯಂತಹ (Predictive Analytics) ಆಧುನಿಕ ತಂತ್ರಜ್ಞಾನಗಳು ಗುಣಮಟ್ಟವನ್ನು ಮತ್ತಷ್ಟು ಬಲಪಡಿಸಲು ಹೊಸ ದಾರಿಗಳನ್ನು ತೆರೆದಿವೆ ಎಂದು ಅವರು ಬಣ್ಣಿಸಿದರು.
ಸಂಬಂಧಿತ ಸುದ್ದಿಗಳು

ಅಂಡರ್-19 ಏಷ್ಯಾ ಕಪ್ ಗೆದ್ದ ಭಾರತ: ರೋಚಕ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಿದ ಯುವ ಪಡೆ, ಪ್ರಧಾನಿ ಮೋದಿ ಅಭಿನಂದನೆ
ಮಸ್ಕತ್ : ಒಮಾನ್ನ ಮಸ್ಕತ್ನಲ್ಲಿ ನಡೆದ ಪುರುಷರ ಅಂಡರ್-19 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ…
◷ 15/11/2026
ಜನ್ಜಾತಿಯ ಗೌರವ್ ದಿವಸ್ ಈಗ ರಾಷ್ಟ್ರೀಯ ಉತ್ಸವವಾಗಿದೆ : ಪ್ರಧಾನಿ ಮೋದಿ
ನವದೆಹಲಿ: 2021ರ ನವೆಂಬರ್ 15ರಂದು ಮೊದಲ ಬಾರಿಗೆ ಆಚರಿಸಲಾದ 'ಜನ್ಜಾತಿಯ ಗೌರವ್ ದಿವಸ್' (ಬುಡಕಟ್ಟು ಹೆಮ್ಮೆಯ ದಿನ) ಈಗ ಇಡೀ ದೇಶದ …
◷ 15/11/2026
ನೂತನ ಪೊಲೀಸ್ ಆಯುಕ್ತರಾಗಿ ಎನ್. ವಿಷ್ಣುವರ್ಧನ್ ಅಧಿಕಾರ ಸ್ವೀಕಾರ
ಮೈಸೂರು : ಮೈಸೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಎನ್. ವಿಷ್ಣುವರ್ಧನ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.…
◷ 14/11/2026
ಸಹಕಾರ ರತ್ನ ಪ್ರಶಸ್ತಿ ಪ್ರದಾನ
ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಬೆಂಗಳೂರಿನಲ್ಲಿ ಇಂದು ಹಮ್ಮಿಕೊಂಡಿದ್ದ 73ನೇ ಸಹಕಾರ ಸಪ್ತಾಹ – 2026ರ ಕಾರ್ಯಕ್ರಮವನ…
◷ 14/11/2026
