ನವದೆಹಲಿ:  2021ರ ನವೆಂಬರ್ 15ರಂದು ಮೊದಲ ಬಾರಿಗೆ ಆಚರಿಸಲಾದ 'ಜನ್‌ಜಾತಿಯ ಗೌರವ್ ದಿವಸ್' (ಬುಡಕಟ್ಟು ಹೆಮ್ಮೆಯ ದಿನ) ಈಗ ಇಡೀ ದೇಶದ ರಾಷ್ಟ್ರೀಯ ಉತ್ಸವವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ  ತಿಳಿಸಿದ್ದಾರೆ.ಮಹಾರಾಷ್ಟ್ರದ ಗಢಚಿರೋಲಿಯಲ್ಲಿ ನಡೆದ ಜನ್‌ಜಾತಿಯ ಗೌರವ್ ದಿವಸ್ ಕಾರ್ಯಕ್ರಮವನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ದೇಶದ ಹಲವು ದಿನಗಳು ಮತ್ತು ಹಬ್ಬಗಳನ್ನು ವಿದೇಶಿ ದೃಷ್ಟಿಕೋನದಿಂದ ನಿರ್ಧರಿಸಲಾಗುತ್ತಿತ್ತು. ಆದರೆ ಇಂದು ಭಾರತವು ತನ್ನ ಪರಂಪರೆ, ಇತಿಹಾಸ ಮತ್ತು ವೀರರನ್ನು ಆತ್ಮಗೌರವದಿಂದ ಸ್ಮರಿಸಿಕೊಳ್ಳುತ್ತಿದೆ. ಇದು ರಾಷ್ಟ್ರೀಯ ಪ್ರಜ್ಞೆಯಲ್ಲಿ ಆಗಿರುವ ದೊಡ್ಡ ಬದಲಾವಣೆಯಾಗಿದೆ ಎಂದರು. ದೇಶದ ಎರಡು ದೊಡ್ಡ ಸಾಧನೆಗಳ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ದೇಶದಲ್ಲಿ ಸುಮಾರು 50 ಕೋಟಿ ಜನರು ತೀವ್ರ ಬಡತನದಿಂದ ಹೊರಬಂದಿದ್ದಾರೆ. ದೇಶವು ನಕ್ಸಲಿಸಮ್ ಮತ್ತು ಮಾವೋವಾದಿ ಭಯೋತ್ಪಾದನೆಯಿಂದ ಮುಕ್ತಿ ಪಡೆದಿದೆ. ಅಭಿವೃದ್ಧಿಯಲ್ಲಿ ಬಹಳ ಹಿಂದಳಿದಿರುವ ಪ್ರದೇಶಗಳಿಗೆ ಸರ್ಕಾರ ವಿಶೇಷ ಒತ್ತು ನೀಡಿದೆ. ದೇಶದ ಬುಡಕಟ್ಟು ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳು ಸೇರಿದಂತೆ 100ಕ್ಕೂ ಹೆಚ್ಚು ಆಕಾಂಕ್ಷಿತ ಜಿಲ್ಲೆಗಳು ಮತ್ತು 500 ಆಕಾಂಕ್ಷಿತ ಬ್ಲಾಕ್‌ಗಳಲ್ಲಿ ವಿಶೇಷ ಅಭಿಯಾನಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು. 'ಪಿಎಂ ಕೃಷಿ ಧನ್-ಧಾನ್ಯ ಯೋಜನೆ'ಯ ಅಡಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಹಿಂದುಳಿದಿರುವ 100 ಜಿಲ್ಲೆಗಳತ್ತ ವಿಶೇಷ ಗಮನ ಹರಿಸಲಾಗುತ್ತಿದೆ ಎಂದರು. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಾಲ್ ಒರಮ್ ಕೂಡ ಉಪಸ್ಥಿತರಿದ್ದು ಮಾತನಾಡಿದರು. ಇದೇ ವೇಳೆ ಪ್ರಧಾನಿ ಮೋದಿ ಅವರು ಆಯ್ದ ಬುಡಕಟ್ಟು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.