ಮದ್ದೂರು : ತಾಲೂಕಿನ ಕೊಪ್ಪ ‌ಹೋಬಳಿಯ ತಗ್ಗಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿನಲ್ಲಿ ಗಂಡು ಚಿರತೆಯೊಂದು ಸೆರೆಯಾಗಿದೆ. ತಾಲ್ಲೂಕಿನ ತಗ್ಗಹಳ್ಳಿ ಗ್ರಾಮದ  ಗಂಗರಾಜು ಅವರ ಪುತ್ರ ಬೋರೆಗೌಡ‌ ಎಂಬವರ ಜಮೀನಲ್ಲಿ ಕಳೆದ ಹಲವು ದಿನಗಳಿಂದ ಇರಿಸಿದ್ದ ಬೋನಿನಲ್ಲಿ ಶುಕ್ರವಾರ ತಡರಾತ್ರಿ ಚಿರತೆ ಸೆರೆಯಾಗಿದೆ. ಸುಮಾರು ಐದು‌ ವರ್ಷದ ಗಂಡು ಚಿರತೆಯಾಗಿದ್ದು ತಗ್ಗಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಮಿತಿಮೀರಿದ ಜತೆಗೆ ಈ ಭಾಗದ ಹಲವು ಗ್ರಾಮಗಳಲ್ಲಿ ರೈತರ ‌ಮೇಕೆ, ಕುರಿ, ಹಸು, ಇನ್ನಿತರ ಪ್ರಾಣಿಗಳ ಮೇಲೆ ದಾಳಿ ನಡೆಸಿ ತಿಂದು ಹಾಕುತ್ತಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮನವಿ ಮಾಡಿದ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಜಮೀನಿನಲ್ಲಿ ಬೋನ್ ಇರಿಸಿದ್ದರು.ಚಿರತೆ ಸೆರಸಿಕ್ಕ ವಿಷಯ ಕಾಡ್ಗಿಚ್ಚಿನಂತೆ ‌ಹರಡಿ ಸ್ಥಳೀಯ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ತಂಡೋಪ ತಂಡವಾಗಿ ಆಗಮಿಸಿ ಚಿರತೆ ನೋಡಲು ಮುಗಿಬಿದ್ದರಲ್ಲದೆ ತಮ್ಮ ಮೊಬೈಲ್ ಪೋನ್ ಮೂಲಕ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾದ ವೇಳೆ ಪೊಲೀಸರು ನಿಯಂತ್ರಿಸಲು ಹರ ಸಾಹಸ ಪಟ್ಟರು.ಮಾಧ್ಯಮದೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಗವಿಯಪ್ಪ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚಿರತೆ ಕಂಡು ಬರುತ್ತಿರುವ ಬಗ್ಗೆ ಸ್ಥಳೀಯ ಸಾರ್ವಜನಿಕರು ದೂರು ನೀಡುತ್ತಿದ್ದು ಈ ಸಂಬಂಧ ಅಗತ್ಯ ಇರುವ ಸ್ಥಳಗಳಲ್ಲಿ ಬೋನ್ ಇರಿಸಲಾಗಿದ್ದು ಈಗಾಗಲೇ  ಕೆಲ ಗ್ರಾಮಗಳಲ್ಲಿ ಚಿರತೆ ಸೆರೆ ಹಿಡಿಯಲಾಗಿದ್ದು ಸೆರೆಯಾಗಿರುವ ಚಿರತೆ ಯನ್ನು ವೈದ್ಯಕೀಯ ತಪಾಸಣೆ ಬಳಿಕ ಬಂಡೀಪುರ ಅಭಯಾರಣ್ಯ ಕಾಡಿಗೆ ಬಿಡಲಾಗುವುದೆಂದು  ತಿಳಿಸಿದರು.