ಹೆಡಿಯಾಲ : ಅರಣ್ಯ ಪ್ರದೇಶದಲ್ಲಿ ಗಂಡಾನೆಗಳ ನಡುವಿನ ಕಾದಾಟದಲ್ಲಿ ಅಂದಾಜು 50 ವರ್ಷದ ಹೆಣ್ಣಾನೆಯೊಂದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ನ.13ರಂದು ಬೆಳಗ್ಗೆ 11.47ರ ಸಮಯದಲ್ಲಿ ಕಲ್ಕೆರೆ ಗಸ್ತಿನ ಕಂಡಿಬೆಟ್ಟ ಫೈರ್‌ಲೈನ್ ಸಮೀಪ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ದುರ್ವಾಸನೆ ಬಂದಿದ್ದು, ಪರಿಶೀಲಿಸಿದಾಗ ಹೆಣ್ಣಾನೆಯೊಂದು ಮೃತಪಟ್ಟಿರುವುದು ಕಂಡುಬಂದಿದೆ. ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಹಾಗೂ ಇಲಾಖೆಯ ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ಡಿ., ಐನೂರು ಮಾರಿಗುಡಿ ವಲಯದ ಅರಣ್ಯಾಧಿಕಾರಿ ಅಕ್ಷಯ್ ಕುಮಾರ್ ಎಂ., ಎನ್‌ಜಿಒ ಪವನ್ ಜೋಷಿ ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ಪಶುವೈದ್ಯಾಧಿಕಾರಿ ಡಾ. ವಾಸಿಂ ಮಿರ್ಜಾ ಅವರು ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು.ಈ ವೇಳೆ ಗಂಡಾನೆಗಳ ನಡುವಿನ ಕಾದಾಟದಿಂದ ಹೆಣ್ಣಾನೆ ಸ್ವಾಭಾವಿಕವಾಗಿ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಆನೆಯ ಮೃತದೇಹವನ್ನು ಅರಣ್ಯ ಪ್ರದೇಶದಲ್ಲಿಯೇ ಸ್ವಾಭಾವಿಕವಾಗಿ ಬಿಡಲಾಯಿತು.