ಬೆಂಗಳೂರು: ರಾಜ್ಯದಲ್ಲಿ ವಾಹನ ಸವಾರರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಹಾಗೂ ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ತಡೆಯಲು ರಾಜ್ಯ ಸರ್ಕಾರ ಮುಂದಾಗಿದ್ದು, ಹೊಸ ವರ್ಷದಿಂದ ಕಠಿಣ ಸಂಚಾರ ನಿಯಮಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಕುರಿತು ಸಾರಿಗೆ ಸಚಿವ ಭೈರತಿ ಸುರೇಶ್ ಮಹತ್ವದ ಮಾಹಿತಿ ನೀಡಿದ್ದಾರೆ. ಇನ್ನು ಮುಂದೆ ಆಟೋಗಳಂತೆ ಬೆಂಗಳೂರಿನಲ್ಲಿ ಸಂಚರಿಸುವ ಓಲಾ, ಉಬರ್, ನಮ್ಮ ಯಾತ್ರಿ ಹಾಗೂ ವಿಯೆಟ್ನಾಂ ಮೂಲದ 'ಗ್ರೀನ್ ಎಸ್‌ಎಂ' (Green SM) ಕ್ಯಾಬ್‌ಗಳಿಗೂ ಮೀಟರ್ ಅಳವಡಿಸುವುದು ಕಡ್ಡಾಯವಾಗಲಿದೆ. ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚರಿಸುವ ಕ್ಯಾಬ್‌ಗಳಿಗೂ ಈ ನಿಯಮ ಅನ್ವಯವಾಗಲಿದೆ. ಈ ಸಂಬಂಧ ಕರಡು ನಿಯಮ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮೀಟರ್ ಇಲ್ಲದೆ ಕ್ಯಾಬ್ ಅಥವಾ ಆಟೋ ಓಡಿಸಿದರೆ ದಂಡ ವಿಧಿಸಲಾಗುತ್ತದೆ. ಪಾದಚಾರಿಗಳ ಸುರಕ್ಷತೆಗಾಗಿ ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈವರೆಗೆ ಇದ್ದ  1,000 ದಂಡವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಮೊದಲ ಬಾರಿ ಉಲ್ಲಂಘನೆ: ₹5,000 ದಂಡ, ಎರಡನೇ ಬಾರಿ ಉಲ್ಲಂಘನೆಗೆ ₹10,000 ದಂಡ,ಮೂರನೇ ಅಥವಾ ನಾಲ್ಕನೇ ಬಾರಿ ಉಲ್ಲಂಘನೆಗೆ ವಾಹನವನ್ನು ಜಪ್ತಿ (ಸೀಜ್)ಗೆ ನಿರ್ಧರಿಸಲಾಗಿದೆ.ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ ನಿಷೇಧ:ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ (Half Helmet) ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸರ್ಕಾರ ಮುಂದಾಗಿದೆ. ಕೇವಲ ಬಳಕೆಗೆ ಮಾತ್ರವಲ್ಲದೆ, ಹಾಫ್ ಹೆಲ್ಮೆಟ್ ತಯಾರಿಕಾ ಕೇಂದ್ರಗಳನ್ನೂ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಎಲ್ಲಾ ನಿಯಮಗಳನ್ನು ಕಾಯ್ದೆಯ ರೂಪದಲ್ಲಿ ಜಾರಿಗೆ ತರಲು ಕಾನೂನು ಅಂಶಗಳ ಪರಿಶೀಲನೆ ಬಹುತೇಕ ಪೂರ್ಣಗೊಂಡಿದ್ದು, ಹೊಸ ವರ್ಷದಿಂದಲೇ ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಯಾಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.