ವಿನಯ್ ದೊಡ್ಡಕೊಪ್ಪಲು ಕೆ.ಆರ್.ನಗರ: ಈ ಬಾರಿ ಮಳೆಯ ಅಭಾವದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗೆ ಸಹಕಾರಿ ಬಂಧುಗಳು ಮುಂದಾಗಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.  ಪಟ್ಟಣದ ಟಿಎಪಿಸಿಎಂಎಸ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ 73ನೇ ಸಹಕಾರ ಸಪ್ತಾಹ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಹಕಾರಿ ಕ್ಷೇತ್ರ ನೀಡಿರುವ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ ಎಂದರು.  ಸಹಕಾರ ಕ್ಷೇತ್ರದಲ್ಲಿ  ಕೆಲಸ ಮಾಡುವಂತಹ ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯವರು  ಸೇವಾ ಮನೋಭಾವನೆಯಿಂದ  ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಆಗ ಈ ಕ್ಷೇತ್ರ ಮತ್ತಷ್ಟು ಹೆಮ್ಮರವಾಗಿ ಬೆಳೆದು ಎಲ್ಲರಿಗೂ ಅನುಕೂಲ ಮಾಡಿಕೊಡಲಿದೆ ಎಂದು ತಿಳಿಸಿದರು.  ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರೂ ಆದ ಹುಣಸೂರು ತಾಲೂಕು ಶಾಸಕ ಜಿ.ಡಿ.ಹರೀಶ್‌ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಸರ್ಕಾರ ರಾಜಕೀಯ ಹಸ್ತಕ್ಷೇಪ ಮಾಡಬಾರದು ಮತ್ತು ಈ ಕ್ಷೇತ್ರದಲ್ಲಿ ಆಡಳಿತ ನಡೆಸುವವರು ಜಾತಿ ಹಾಗೂ ರಾಜಕೀಯ ಮಾಡದೇ ರೈತರ ಏಳಿಗೆಗೆ ದುಡಿಯಬೇಕು ಎಂದು ಹೇಳಿದರು.  ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕನ್ನಾಗಿ ಆಡಳಿತ ಮಂಡಳಿ ಸಭೆಗಳಲ್ಲಿ ರೈತರಿಗೆ ಅನುಕೂಲವಾಗುವಂತಹ ಕೆಲಸ ಮಾಡಲು ಅಧ್ಯಕ್ಷರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿದ್ದೇನೆಯೇ ಹೊರತು ನನ್ನ  ವೈಯಕ್ತಿಕ  ಹಿತ್ತಾಸಕ್ತಿಗೆ ಮಾತನಾಡಿಲ್ಲ ಎಂದು ಹೇಳಿದಲ್ಲರದೆ ಸಹಕಾರಿ ಕ್ಷೇತ್ರದಲ್ಲಿ ಇರುವುದು ನನಗೆ ಹೆಮ್ಮೆಯ ವಿಚಾರ ಎಂದರು.   ಎರಡು ಜಿಲ್ಲೆಯ ರೈತರ ಜೀವನಾಡಿಯಾಗಿರುವ ಎಂಸಿಡಿಸಿಸಿ ಬ್ಯಾಂಕಿಗೆ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ಮತ್ತು ಸಹಾಯ ಧನ ಬರುವುದಿಲ್ಲ. ರೈತರ ಷೇರು ಹಣದಿಂದ ಬ್ಯಾಂಕು ನಡೆಯುತ್ತಿದ್ದು, ರೈತರಿಗೆ ಉತ್ತಮ ಸೇವೆ ಮತ್ತು ಸವಲತ್ತು ನೀಡಲು ಎಲ್ಲಾ ಸಹಕಾರಿಗಳು ಪಕ್ಷ ಮತ್ತು ಜಾತಿ ರಹಿತವಾಗಿ ಸಹಕಾರ ನೀಡಬೇಕು ಎಂದು ಕೋರಿದರು.  ಸರ್ಕಾರ ಲೀಟರ್ ಹಾಲಿಗೆ 8 ರೂಗಿಂತ ಹೆಚ್ಚು ದರ ನಿಗದಿಪಡಿಸಿರುವುದರಿಂದ ಹಾಲು ಒಕ್ಕೂಟಕ್ಕೆ ನಷ್ಟವಾಗುವ ಸಾಧ್ಯತೆಗಳು ಹೆಚ್ಚಾಗಿವೆ.  ಹಾಲಿನ ದರ ಹೆಚ್ಚಿಸುವ ಬದಲು ಹಾಲು ಉತ್ಪಾದಕರಿಗೆ ಶೇ.5 ರೂ ಪ್ರೋತ್ಸಾಹ ಧನ ನೀಡುವ ತೀರ್ಮಾನ ಮಾಡಬೇಕಿತ್ತೆಂದು ಅಭಿಪ್ರಾಯಪಟ್ಟರು.  ಎಂಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ ಮಾತನಾಡಿ ಸಹಕಾರ ಕ್ಷೇತ್ರ ಆರಂಭಿಸಿ ಅದರ ಬೆಳವಣಿಗೆಗೆ ಕಾರಣರಾದ ಸಿದ್ದನಗೌಡ ರಾಮನಗೌಡ ಪಾಟೀಲ, ಮಹಾತ್ಮಾಗಾಂಧೀಜಿ ಮತ್ತು ಮಾಜಿ ಪ್ರಧಾನಿ ಜವಾಹರಲಾಲನೆಹರು ಅವರುಗಳಿಗೆ ಕೃತಜ್ಞೆ  ಸಲ್ಲಿಸಿದರಲ್ಲದೆ ಇಂತಹ ಮಹಾತ್ಮರಿಂದ ಪ್ರಾರಂಭಗೊಂಡ ಈ ಕ್ಷೇತ್ರವನ್ನು  ಉತ್ತಮವಾಗಿ ಬೆಳೆಸಲು ಎಲ್ಲರೂ ಸಹಕಾರ ನೀಡಬೇಕು ಎಂದರು. ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಎ.ಟಿ.ಸೋಮಶೇಖರ್, ನವನಗರ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ಬಸಂತ್ ಮಾತನಾಡಿದರು.  ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾಮಂಡಳದ ಅಧ್ಯಕ್ಷ ಎಂ.ರಮೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಸಿದ್ದೇಗೌಡ, ಜಿಲ್ಲಾ ಹಾಪ್‌ಕಾಮ್ಸ್ ನಿರ್ದೇಶಕರಾದ ಟಿ.ರಾಮೇಗೌಡ, ಹೆಚ್.ಎಸ್.ಚಂದ್ರೇಗೌಡ, ಎಂ.ವಿ.ಸಂಜಯ್, ಮೈಮುಲ್ ಮಾಜಿ ಅಧ್ಯಕ್ಷ ಕೆ.ಉಮಾಶಂಕರ್, ಎಂಸಿಡಿಸಿಸಿ ಬ್ಯಾಂಕಿನ ಸಿಇಒ ಡಾ.ಬಿ.ಶಂಕರ್, ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಎಸ್.ರವಿ, ಜಿಲ್ಲಾ ಸಹಕಾರ ಬ್ಯಾಂಕಿನ ಮೇಲ್ವಿಚಾರಕ ಎನ್.ದಿನೇಶ್, ಕೆ.ಅರ್.ನಗರ ಶಾಖೆಯ ವ್ಯವಸ್ಥಾಪಕ ಪ್ರತಾಪ್  ಹಾಜರಿದ್ದರು.