ಮೈಸೂರು :  ಚಾರ್ಜ್ ಶೀಟ್ ಸಲ್ಲಿಕೆ ಮುನ್ನವೇ ಡೆತ್ ಸರ್ಟಿಫಿಕೇಟ್ ಪಡೆದಿದ್ದ ಪತಿ ಸುರೇಶ್, ಮಾಧ್ಯಮಗಳ ಮುಂದೆ ಸುಳ್ಳು ಹೇಳಿದ್ದಾನೆ ಎಂದು ವಕೀಲ ಅರುಣ್ ಕುಮಾರ್ ಆರೋಪಿಸಿದ್ದಾರೆ. ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ದಾಖಲೆಗಳನ್ನು ಬಹಿರಂಗಪಡಿಸಿದರು.ಸಾವನ್ನಪ್ಪಿದ್ದಾಳೆಂದುಕೊಂಡಿದ್ದ ಮಹಿಳೆ ಜೀವಂತವಾಗಿ ಪತ್ತೆಯಾಗಿದ್ದ ಪ್ರಕರಣ ಇದಾಗಿದೆ. ಮಲ್ಲಿಗೆ ಎಂಬ ಮಹಿಳೆ ಕಾಣೆಯಾಗಿದ್ದಾಳೆಂದು ಪತಿ ಸುರೇಶ್ ದೂರು ನೀಡಿದ್ದರು. ಇದೇ ವೇಳೆ ಪತ್ತೆಯಾಗಿದ್ದ ಅಪರಿಚಿತ ಶವ ಮಲ್ಲಿಗೆಯದ್ದೇ ಎಂದು ಮಲ್ಲಿಗೆಯ ತಾಯಿ ಗೌರಿ ಹಾಗೂ ಅಪ್ರಾಪ್ತ ಪುತ್ರ ಗುರುತಿಸಿದ್ದರು. ಮಲ್ಲಿಗೆಯನ್ನು ಆಕೆಯ ಪತಿ ಸುರೇಶ್ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿತ್ತು. ಪರಿಣಾಮ ಸುರೇಶ್ ಜೈಲು ಪಾಲಾಗಿದ್ದರು.ಪ್ರಕರಣ ವಿಚಾರಣೆ ಹಂತದಲ್ಲಿ ಇರುವಾಗ ಮಲ್ಲಿಗೆ ಕಾಣಿಸಿಕೊಂಡಿದ್ದರು. ಈ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರುತ್ತಿದ್ದಂತೆ ಸುರೇಶ್ ನಿರ್ದೋಷಿ ಎಂದು ಖುಲಾಸೆಗೊಳಿಸಲಾಗಿತ್ತು.ಆದರೆ ಆರೋಪಿ ಸ್ಥಾನದಲ್ಲಿ ಇದ್ದ ಸುರೇಶ್, ಪತ್ನಿ ಮಲ್ಲಿಗೆ ಸಾವನ್ನಪ್ಪಿದ ಬಗ್ಗೆ ಡೆತ್ ಸರ್ಟಿಫಿಕೇಟ್ ನೀಡುವಂತೆ ಅರ್ಜಿ ಸಲ್ಲಿಸಿದ್ದಾನೆ ಎಂದು ಅರುಣ್ ಕುಮಾರ್ ಹೇಳಿದರು. ತಹಶೀಲ್ದಾರ್ ಕಚೇರಿ, ಪೊಲೀಸ್ ಠಾಣೆಗಳಲ್ಲಿ ಅಪ್ಲೈ ಮಾಡಿ, ನ್ಯಾಯಾಲಯದಿಂದಲೇ ಡೆತ್ ಸರ್ಟಿಫಿಕೇಟ್ ಪಡೆದಿರುವ ಸುರೇಶ್ ನಡೆ ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದರು. ವಕೀಲರ ತಂಡಕ್ಕೆ ತಡವಾಗಿ ಡೆತ್ ಸರ್ಟಿಫಿಕೇಟ್ ಪಡೆದ ಅರ್ಜಿಗಳು ಸಿಕ್ಕಿವೆ ಎಂದು ಅವರು ಹೇಳಿದರು.ಪತ್ನಿ ಮಲ್ಲಿಗೆ ಬದುಕಿದ್ದಾಳೆಂದು ವಾದಿಸುತ್ತಾ ಬಂದಿದ್ದ ಸುರೇಶ್, ಪತ್ನಿಯ ಡೆತ್ ಸರ್ಟಿಫಿಕೇಟ್ ನೀಡುವಂತೆ ಮನವಿ ಪತ್ರ ಸಲ್ಲಿಸಿದ್ದಾನೆ. ಹಾಗಾಗಿ ಸುರೇಶ್ ವಿರುದ್ಧವೂ ವಿಚಾರಣೆ ನಡೆಸಬೇಕು ಎಂದು ಅರುಣ್ ಕುಮಾರ್ ಆಗ್ರಹಿಸಿದರು.ಪೊಲೀಸ್ ಇಲಾಖೆಯಲ್ಲಿ ಸಮಗ್ರ, ಸರಿಯಾದ ತನಿಖೆ ಆಗಬೇಕು ಎಂದು ಅವರು ಹೇಳಿದರು. ಇನ್ಸ್‌ಪೆಕ್ಟರ್ ಬಿ.ಜಿ. ಪ್ರಕಾಶ್ ಪ್ರಕರಣದ ಸಂಪೂರ್ಣ ತನಿಖಾಧಿಕಾರಿಯಲ್ಲ. ಅಪರಿಚಿತ ಶವ ಗುರುತಿಸಿದ್ದು ಇನ್ಸ್‌ಪೆಕ್ಟರ್ ಪ್ರಕಾಶ್ ಸಮ್ಮುಖದಲ್ಲಿ ಅಲ್ಲ. ದಾಖಲಾತಿ ಸಂಗ್ರಹದಲ್ಲೂ ಪ್ರಕಾಶ್ ಪಾತ್ರವಿಲ್ಲ. ಆ ಸಂದರ್ಭದಲ್ಲಿ ಪ್ರಕಾಶ್ ಪಿರಿಯಾಪಟ್ಟಣ ಠಾಣೆಯ ಇನ್ಸ್‌ಪೆಕ್ಟರ್ ಆಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಹಿಂದಿನ ಎಸ್‌ಪಿ, ಸಬ್ ಇನ್ಸ್‌ಪೆಕ್ಟರ್ ಸೇರಿ ಪೇದೆಗಳ ಸೂಕ್ತ ವಿಚಾರಣೆ ನಡೆಸಬೇಕು. ಯಾವುದೇ ವಿಚಾರಣೆ ನಡೆಸದೆ ಐಓ ಅವರನ್ನು ಬಲಿಪಶು ಮಾಡಿದ್ದಾರೆ ಎಂದು ಆರೋಪಿಸಿದರು.