ಮೈಸೂರು : ​ಪ್ರೌಢಶಾಲೆಗಳು, ಪದವಿ ಕಾಲೇಜುಗಳು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಕಡ್ಡಾಯವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಮಲ್ಲಿಕ್   ಹೇಳಿದರು.ಇಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ N cord ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗದಂತೆ ತಡೆಯಲು ಹುಣಸೂರು ರಸ್ತೆ ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಮೆಡಿಕಲ್ ಕಾಲೇಜುಗಳ ಆವರಣ ಮತ್ತು ಪ್ರಮುಖ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ಸುತ್ತಮುತ್ತ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳು, ವಾಹನಗಳು ಹಾಗೂ ಹೊರಗಿನಿಂದ ಬರುವ ಡೆಲಿವರಿ ಬಾಯ್‌ಗಳು ಮತ್ತು ಟೀ ಮಾರಾಟಗಾರರ ಮೇಲೆ ನಿಗಾ ಇರಿಸಿ ಪೊಲೀಸರೊಂದಿಗೆ ಸೇರಿ ಅನಿರೀಕ್ಷಿತ ತಪಾಸಣೆ ನಡೆಸಬೇಕು ಎಂದು ಹೇಳಿದರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಹಾಯಕ ಔಷಧ ನಿಯಂತ್ರಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಆಸ್ಪತ್ರೆ ಮತ್ತು ಮೆಡಿಕಲ್ ಸ್ಟೋರ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ವೈದ್ಯರ ಸಲಹಾ ಚೀಟಿ ಇಲ್ಲದೆ ಯಾವುದೇ ಔಷಧ ನೀಡದಂತೆ ಕಡ್ಡಾಯವಾಗಿ ಫಲಕ ಹಾಕಿಸಬೇಕು. ಅಕ್ರಮವಾಗಿ ಮಾದಕ ವಸ್ತು ಮಾರಾಟ ಕಂಡುಬಂದಲ್ಲಿ ತಕ್ಷಣ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಲು ಸೂಚಿಸಿದರು.​ಮಾದಕ ವ್ಯಸನಿಗಳಿಗೆ ಕೌನ್ಸಿಲಿಂಗ್ ನಡೆಸುವ ಸಂದರ್ಭದಲ್ಲಿ ಅವರಿಗೆ ಡ್ರಗ್ಸ್ ಎಲ್ಲಿಂದ ಪೂರೈಕೆಯಾಗುತ್ತಿದೆ ಎಂಬ ಮಾಹಿತಿಯನ್ನು ಕಲೆಹಾಕಿ ಪೆಡ್ಲರ್‌ಗಳ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸ್ ಇಲಾಖೆಗೆ ಸಹಕರಿಸುವಂತೆ ಆರೋಗ್ಯ ಇಲಾಖೆ ಹಾಗೂ ಪುನಶ್ಚೇತನ ಕೇಂದ್ರಗಳಿಗೆ ತಿಳಿಸಿದರು.​ಕಾಡಂಚಿನ ಗ್ರಾಮಗಳು, ಹಾಡಿಗಳು ಹಾಗೂ ಬೈಲಕುಪ್ಪೆ ಮತ್ತು ಗುರುಪುರ ಟಿಬೆಟಿಯನ್ ನಿರಾಶ್ರಿತರ ಕ್ಯಾಂಪ್‌ಗಳ ವ್ಯಾಪ್ತಿಯಲ್ಲಿ ಗಾಂಜಾ ಬೆಳೆಯುವುದು ಮತ್ತು ಮಾರಾಟ ಮಾಡುವುದನ್ನು ತಡೆಯಲು ಅರಣ್ಯ, ಕೃಷಿ ಹಾಗೂ ಅಬಕಾರಿ ಇಲಾಖೆಗಳು ಡ್ರೋನ್ ಕ್ಯಾಮೆರಾ ಮೂಲಕ ಪರಿಶೀಲನೆ ನಡೆಸಿ ಜಂಟಿ ದಾಳಿ ನಡೆಸುವಂತೆ ಹೇಳಿದರು.​ಮೈಸೂರು ಕೇಂದ್ರ ಕಾರಾಗೃಹ ಮತ್ತು ಉಪ ಕಾರಾಗೃಹಗಳಲ್ಲಿನ ವಿಚಾರಣಾಧೀನ ಹಾಗೂ ಸಜಾ ಬಂಧಿಗಳಿಗೆ ಯಾವುದೇ ರೀತಿಯ ಮಾದಕ ವಸ್ತು ಸರಬರಾಜಾಗದಂತೆ ಜೈಲು ಅಧಿಕಾರಿಗಳು ಎಚ್ಚರ ವಹಿಸಬೇಕು.  ಸರಕು ಸಾಗಾಣಿಕೆ ವಾಹನಗಳನ್ನು ತಪಾಸಣೆ ಮಾಡುವಾಗ ಮಾದಕ ವಸ್ತು ಸಾಗಾಟ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಜಿ.ಎಸ್.ಟಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.