ಬೆಂಗಳೂರು :  ರಾಜ್ಯ ರಾಜಕಾರಣ ಹಾಗೂ ಆಡಳಿತ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಹಾಸನ ಜಿಲ್ಲಾಧಿಕಾರಿ ಕಚೇರಿಯ ‘ಲಂಚದ ವಾಟ್ಸ್‌ಆ್ಯಪ್ ಚಾಟ್’ ಪ್ರಕರಣ  ಕುರಿತಂತೆ  ಹೊಸದೊಂದು ಟ್ವೀಟ್‌  ಲಭಿಸಿದೆ. ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ನೀಡಿದ್ದ ದೂರಿನ ಆಧಾರದ ಮೇಲೆ, ಸೈಬರ್ ಕಮಾಂಡ್ ಸೆಂಟರ್ ಪೊಲೀಸರು ಕೇಂದ್ರ ಸಚಿವ ಹೆಚ್​​​.ಡಿ. ಕುಮಾರಸ್ವಾಮಿ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.ಕಳೆದ ನವೆಂಬರ್ 8ರಂದು ಹಾಸನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಹಾಸನ ಜಿಲ್ಲಾಡಳಿತದಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು 75 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು, ಡಿಸಿ ಆಪ್ತ ಸಹಾಯಕ ಶಶಿಕಿರಣ್ ಹಾಗೂ ಮಧ್ಯವರ್ತಿಯೊಬ್ಬರ ನಡುವೆ ನಡೆದಿದೆ ಎನ್ನಲಾದ ವಾಟ್ಸ್‌ ಆ್ಯಪ್ ಚಾಟ್ ಸ್ಕ್ರೀನ್‌ಶಾಟ್‌ಗಳನ್ನು ಮಾಧ್ಯಮಗಳ ಮುಂದೆ ಓದಿ ಬಹಿರಂಗಪಡಿಸಿದ್ದರು. ತಮಗೆ ಬಂದಿರುವ ಈ ಚಾಟ್ ಬಗ್ಗೆ ಸರ್ಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ ಎಂದು ಅವರು ಆಗ್ರಹಿಸಿದ್ದರು.  ಹಾಸನ ಡಿಸಿ ಪಿಎ ಶಶಿಕಿರಣ್ ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರು.  ತಮ್ಮ ಹೆಸರು ಮತ್ತು ಫೋನ್ ನಂಬರ್ ಬಳಸಿ ಎಐ ತಂತ್ರಜ್ಞಾನದ ಮೂಲಕ ನಕಲಿ ವಾಟ್ಸ್‌ಆ್ಯಪ್ ಚಾಟ್ ಸೃಷ್ಟಿಸಿ ವೈರಲ್ ಮಾಡಲಾಗಿದೆ ಎಂದು ಆರೋಪಿಸಿ ಹಾಸನ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆ ಕಲಂ 335 ಮತ್ತು 336(4) ಅಡಿಯಲ್ಲಿ ಎಫ್‌ ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆಯ ಭಾಗವಾಗಿ ನಕಲಿ ಚಾಟ್ ಮೂಲದ ಕುರಿತು ಮಾಹಿತಿ ಪಡೆಯಲು ಇದೀಗ ಸೈಬರ್ ಕಮಾಂಡ್ ಸೆಂಟರ್ ಮೂಲಕ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿದ್ದಾರೆ.