ಬೆಂಗಳೂರು :  ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ಕೇವಲ 'ಸುಳ್ಳಿನ ಗ್ಯಾರಂಟಿ' ಮತ್ತು 'ವಂಚನೆಯ ಗ್ಯಾರಂಟಿ'ಗಳಾಗಿವೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ರಾಜ್ಯದ ಜನತೆಗೆ ಐದು ಗ್ಯಾರಂಟಿಗಳ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಇಂದು ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಹೆಂಡತಿಗೆ ಉಚಿತ ಬಸ್ ಪ್ರಯಾಣ ಎಂದು ಹೇಳಿ, ಪಕ್ಕದಲ್ಲೇ ಕೂರುವ ಗಂಡನಿಗೆ ಡಬಲ್ ಚಾರ್ಜ್ ಮತ್ತು ತೆರಿಗೆ ಹೊರೆ ಹಾಕಲಾಗುತ್ತಿದೆ. ಈ ಸರ್ಕಾರದ ದುರಾಡಳಿತದಿಂದ ಸಾರಿಗೆ ಇಲಾಖೆ ನಷ್ಟಕ್ಕೆ ಸಿಲುಕಿದ್ದು, ಬಸ್ ದರವನ್ನು ಶೇ. 35 ರಿಂದ 45 ರಷ್ಟು ಏರಿಕೆ ಮಾಡಲಾಗಿದೆ ಎಂದರು. ಮನೆಯಲ್ಲಿ ಗೌರವದಿಂದ ಬದುಕುತ್ತಿದ್ದ ತಾಯಂದಿರನ್ನು ₹2,000 ನೆಪದಲ್ಲಿ ಅಪಹಾಸ್ಯಕ್ಕೆ ಈಡುಮಾಡಲಾಗಿದೆ. ವಿಳಾಸ ಸರಿ ಇಲ್ಲ, ತೆರಿಗೆ ಪಾವತಿಸುತ್ತಿದ್ದೀರಿ, ಬೇರೆಯವರ ಹೆಸರಿನಲ್ಲಿ ಖಾತೆ ಇದೆ ಎಂಬ ನಾನಾ ನೆಪಗಳನ್ನು ಹೇಳಿ ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸಲಾಗುತ್ತಿದೆ. 'ವೋಟ್ ಚೋರಿ' ಎಂದು ಬೊಬ್ಬೆ ಹೊಡೆಯುತ್ತಿದ್ದವರು, ಇಂದು ಸ್ವತಃ 'ಗ್ಯಾರಂಟಿ ಚೋರಿ' ಮಾಡುತ್ತಿದ್ದಾರೆ. ರಾಜ್ಯದ ಯುವಕರಿಗೆ ನೀಡಿದ 'ಯುವನಿಧಿ' ಭರವಸೆ ಕೇವಲ ಕಾಗದಕ್ಕೆ ಸೀಮಿತವಾಗಿದೆ. ಇದುವರೆಗೂ ಯುವಕರಿಗೆ ಈ ಯೋಜನೆ ಸಮರ್ಪಕವಾಗಿ ತಲುಪಿಲ್ಲ. 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿಗೇ ತಮ್ಮ ಗ್ಯಾರಂಟಿ ಹೆಸರಿಟ್ಟುಕೊಂಡಿದ್ದಾರೆ. ಉಳಿದ 5 ಕೆಜಿ ಅಕ್ಕಿಯ ಬದಲಿಗೆ 'ಇಂದಿರಾ ಕಿಟ್' ನೀಡುವುದಾಗಿ ಹೇಳಿದ್ದ ಭರವಸೆಯೂ ಹುಸಿಯಾಗಿದೆ. ವಿದ್ಯುತ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ: ವಿದ್ಯುತ್ ದರ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣವಿಲ್ಲದೆ ಗಗನಕ್ಕೇರಿದೆ ಎಂದು ವಾಗ್ದಾಳಿ ನಡೆಸಿದರು.ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸಿರುವ ಈ ಸರ್ಕಾರದ ವಂಚನೆ ಮತ್ತು ಸುಳ್ಳಿನ ಗ್ಯಾರಂಟಿಗಳ ಸತ್ಯಾಸತ್ಯತೆಯನ್ನು ರಾಜ್ಯದ ಪ್ರತಿ ಮನೆಗೂ ತಲುಪಿಸುವುದು ನಮ್ಮ ಜವಾಬ್ದಾರಿಯಾಗಿದೆ.ಕೇವಲ ₹6,000 ವೇತನಕ್ಕಾಗಿ ಇಡೀ ತಿಂಗಳು ದುಡಿಯುವ ರಾಜ್ಯದ ಆಶಾ ಕಾರ್ಯಕರ್ತೆಯರು ಇಂದು ನ್ಯಾಯಕ್ಕಾಗಿ ಬೆಂಗಳೂರಿನ ರಸ್ತೆಗಳಲ್ಲಿ ಮಲಗುವ ದುಃಸ್ಥಿತಿ ಎದುರಾಗಿದೆ. ಹೆಣ್ಣುಮಕ್ಕಳನ್ನು ತಾಯಂದಿರಂತೆ ಗೌರವಿಸುವ ನಮ್ಮ ನಾಡಿನಲ್ಲಿ, ಅವರ ನೋವಿಗೆ ಸ್ಪಂದಿಸಬೇಕಾದ ಸರ್ಕಾರ ದುಂದುವೆಚ್ಚದ ಔತಣಕೂಟಗಳಲ್ಲಿ ಮುಳುಗಿರುವುದು ನಾಚಿಕೆಗೇಡಿನ ಸಂಗತಿ. ​ಜನರ ಸಮಸ್ಯೆಗಳನ್ನು ಬಗೆಹರಿಸಲು ಹಣವಿಲ್ಲ, ಆಡಳಿತ ನಡೆಸಲು ಸಾಧ್ಯವಿಲ್ಲ ಎಂದಾದರೆ ಕೂಡಲೇ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿಯಿರಿ. ಈ ಸರ್ಕಾರದ ಆಡಳಿತದಿಂದ ರಾಜ್ಯದ ಜನತೆಗೆ ಈಗಾಗಲೇ ಭ್ರಮನಿರಸನವಾಗಿದೆ ಎಂದರು.