ಮಂಡ್ಯ :  ಕೆಲಸಕ್ಕೆ ಬಾರದವರೆಂದು ಹೆಚ್‌ಡಿಕೆ ನಾಮಫಲಕವನ್ನು ಕೆಡಿಪಿ ಸಭೆಯಲ್ಲಿ  ಶಾಸಕ ಕದಲೂರು  ಉದಯ್ ಅವರು ತೆಗೆಸಿದ ಘಟನೆ ನಡೆದಿದೆ. ಇಂದು ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ  ಮದ್ದೂರು ಶಾಸಕ ಉದಯ್ ಅವರು ಟೇಬಲ್ ಮೇಲೆ ಕುಮಾರಸ್ವಾಮಿ ನಾಮಫಲಕ ಕಂಡು ಅಧಿಕಾರಿಗಳ ವಿರುದ್ದ ಗರಂ ಆದರು. ಕುಮಾರಸ್ವಾಮಿ ಮಂಡ್ಯ ಸಂಸದರಾಗಿರುವ ಹಿನ್ನಲೆಯಲ್ಲಿ ಶಿಷ್ಟಾಚಾರದ ಪ್ರಕಾರ  ಅಧಿಕಾರಿಗಳು ನಾಮಫಲಕ ಇಟ್ಟಿದ್ದರು. ನಾಮಫಲಕ ಕಂಡು ಶಾಸಕ ಉದಯ್ ಕೆಂಡಾಮಂಡಲರಾದರು.ಉದಯ್ ನಾಮಫಲಕವನ್ನು ವೇದಿಕೆಯ ಕಡೆಯಲ್ಲಿ  ಅಧಿಕಾರಿಗಳು ಇಟ್ಟಿದ್ದರು. ಮಧ್ಯದಲ್ಲಿ ಕುಮಾರಸ್ವಾಮಿ ನಾಮಫಲಕ ಇಟ್ಟಿದ್ದಕ್ಕೆ  ಕೋಪಗೊಂಡ ಅವರು ಯಾರೋ ಕೆಲಸಕ್ಕೆ ಬಾರದವರ ನಾಮಫಲಕ ಇಟ್ಟಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕರು ಗರಂ ಆಗುತ್ತಿದ್ದಂತೆ ಓಡೋಡಿ ಬಂದ ಅಧಿಕಾರಿಗಳು ಹೆಚ್‌ಡಿಕೆ ನಾಮಫಲಕ ತೆಗೆದರು. ಬಳಿಕ ಅದೇ ಸ್ಥಳಕ್ಕೆ ಶಾಸಕ ಉದಯ್ ಅವರ  ನಾಮಫಲಕ ಅಳವಡಿಸಿದ ಪ್ರಸಂಗವೂ ನಡೆಯಿತು.