ನವದೆಹಲಿ : 2014ಕ್ಕಿಂತ ಮೊದಲು ಭಾರತದಲ್ಲಿ ಮೆಟ್ರೋ ರೈಲು ಜಾಲ ವಿಸ್ತರಣೆಯಾಗುತ್ತಿದ್ದ ವೇಗವನ್ನೇ ಗಮನಿಸಿದರೆ, ಪುಣೆಯಂತಹ ಪ್ರಮುಖ ನಗರಗಳು ಮೆಟ್ರೋ ಸೇವೆ ಪಡೆಯಲು ಹಲವು ದಶಕಗಳ ಕಾಲ ಕಾಯಬೇಕಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ದೇಶದ ಸಾರಿಗೆ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 2014 ರಲ್ಲಿ  ದೇಶದ ಕೇವಲ 5 ನಗರಗಳಲ್ಲಿ ಒಟ್ಟು 248 ಕಿ.ಮೀ ಮೆಟ್ರೋ ಮಾರ್ಗ ಮಾತ್ರ ಕಾರ್ಯಾಚರಣೆಯಲ್ಲಿತ್ತು. ಆದರೆ ಇಂದು ದೇಶದ 26 ನಗರಗಳಲ್ಲಿ ಮೆಟ್ರೋ ಜಾಲವು ಸುಮಾರು 1,200 ಕಿ.ಮೀ ಗೆ ವಿಸ್ತರಿಸಿದೆ. ಪ್ರತಿದಿನ 1 ಕೋಟಿಗೂ ಹೆಚ್ಚು ಜನರು ಮೆಟ್ರೋ ಸೇವೆ ಬಳಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.ನಗರ ಜೀವನದ ಮೇಲಾದ ಪ್ರಭಾವ:ಈ ಬೆಳವಣಿಗೆಯು ಕೇವಲ ಸಂಖ್ಯೆ ಅಥವಾ ಅಂಕಿ-ಅಂಶಗಳಿಗೆ ಸೀಮಿತವಾಗಿಲ್ಲ. ಟ್ರಾಫಿಕ್ ಸಮಸ್ಯೆ ಕಡಿಮೆಯಾಗಿ ಪ್ರಯಾಣದ ಸಮಯ ಉಳಿತಾಯವಾಗುತ್ತಿದೆ. ಇದರಿಂದಾಗಿ ಜನರು ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು, ಉತ್ಪಾದಕತೆ ಹೆಚ್ಚಿಸಲು ಮತ್ತು ಹೊಸ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಭಾರತದ ನಗರಗಳ ಸಮಗ್ರ ರೂಪಾಂತರಕ್ಕೆ ಈ ಮೆಟ್ರೋ ಜಾಲವು ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.