Friday, May 1, 2026
Google search engine

Homeರಾಜ್ಯರಾಜ್ಯದಲ್ಲಿಯೇ ಪ್ರಥಮಬಾರಿಗೆ ಕಾಗದ ರಹಿತ ನೋಂದಣಿಗೆ ಚಾಲನೆ : ಕಾವೇರಿ 2.0 ಪೋರ್ಟಲ್ ನೋಂದಣಿಯಿಂದ...

ರಾಜ್ಯದಲ್ಲಿಯೇ ಪ್ರಥಮಬಾರಿಗೆ ಕಾಗದ ರಹಿತ ನೋಂದಣಿಗೆ ಚಾಲನೆ : ಕಾವೇರಿ 2.0 ಪೋರ್ಟಲ್ ನೋಂದಣಿಯಿಂದ ನಾಗರಿಕರಿಗೆ ಅನುಕೂಲ: ಮುಲೈ ಮುಹಿಲನ್

ಚಾಮರಾಜನಗರ : ರಾಜ್ಯ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾವೇರಿ 2.0 ಪೋರ್ಟಲ್ ಮೂಲಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಚಾಮರಾಜನಗರ ಪಟ್ಟಣದ ಉಪನೋಂದಣಿ ಕಚೇರಿಯಲ್ಲಿ ಕಾಗದ ರಹಿತ ನೋಂದಣಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ಎಂ.ಪಿ. ಮುಲೈ ಮುಹಿಲನ್ ಚಾಲನೆ ನೀಡಿದರು.
 
ನಗರದ ತಾಲೂಕು ಕಚೇರಿ ಅವರಣದಲ್ಲಿರುವ ನೋಂದಣಿ ಕಚೇರಿಯಲ್ಲಿ ಜಿಲ್ಲೆಯ ರೈತರಿಗೆ ಕಾಗದ ರಹಿತ ನೋಂದಣಿ ಪ್ರಕ್ರಿಯೆಗೆ ಕಂಪ್ಯೂಟರ್ ಬಟನ್ ಒತ್ತುವ ಮೂಲಕ ಮೂಲಕ ಚಾಲನೆ ನೀಡಿದರು.

ಬಳಿಕ ಮಾನಾಡಿದ ಅವರು ನೂತನ ಕಾಗದ ರಹಿತ ನೋಂದಣಿ ವ್ಯವಸ್ಥೆಯು ನಾಗರಿಕ ಕೇಂದ್ರಿತ, ಪಾರದರ್ಶಕ ಹಾಗೂ ಪರಿಣಾಮಕಾರಿ ನೋಂದಣಿ ಸೇವೆಗಳನ್ನು ಒದಗಿಸುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಸಾಂಪ್ರದಾಯಿಕ ಕಾಗದ ಆಧಾರಿತ ನೋಂದಣಿ ವ್ಯವಸ್ಥೆಯಿಂದ ಸಂಪೂರ್ಣ ಡಿಜಿಟಲ್, ಕಾಗದರಹಿತ ವ್ಯವಸ್ಥೆಗೆ ಆಗುತ್ತಿರುವ ಪರಿವರ್ತನೆ, ಆಸ್ತಿ ವ್ಯವಹಾರಗಳನ್ನು ನಿರ್ವಹಿಸುವ ವಿಧಾನದಲ್ಲಿ ಮಹತ್ತರ ಬದಲಾವಣೆ ಜೊತೆಗೆ ವಿಶ್ವಾಸಾರ್ಹತೆ ಹೆಚ್ಚುತ್ತದೆ ಎಂದರು.

ಹೊಸ ವ್ಯವಸ್ಥೆಯ ಪ್ರಯೋಜನಗಳು ಕೇವಲ ಸುಧಾರಣೆಯಷ್ಟೇ ಅಲ್ಲ. ಹಳೆಯ ಕೈಚಾಲಿತ ವ್ಯವಸ್ಥೆಯಲ್ಲಿದ್ದ ಸಮಸ್ಯೆಗಳು ಮತ್ತು ತೊಂದರೆಗಳಿಗೆ ಸಮಗ್ರ ಪರಿಹಾರ ಒದಗಿಸಲಿವೆ. ಕಾಗದದ ವ್ಯವಸ್ಥೆಯಿಂದ ಭೌತಿಕ ದಾಖಲೆಗಳು ನಕಲಿ, ಅಕ್ಷರ ಬದಲಾವಣೆ, ಪುಟ ಬದಲಾವಣೆ ಹಾಗೂ ನಂತರದ ತಿದ್ದುಪಡಿಗಳಿಗೆ ಒಳಪಡುವ ಸಾಧ್ಯತೆಗಳು ಇದ್ದವು ಪರಿಶೀಲನೆ ಬಹುತೇಕ ಕೈಚಾಲಿತವಾಗಿದ್ದು ದೋಷಗಳ ಸಾಧ್ಯತೆ ಹೆಚ್ಚು ಇರುತ್ತದೆ ಎಂದರು.

ನೂತನ ಕಾಗದರಹಿತ ವ್ಯವಸ್ಥೆಯಿಂದ ಡಿಜಿಟಲ್ ದಾಖಲೆಗಳು ಎನ್ನಿಪ್ಪನ್, ಆಡಿಟ್ ಟ್ರೇಲ್ ಮತ್ತು ಹ್ಯಾಶ್ ಆಧಾರಿತ ಪರಿಶೀಲನೆಯ ಮೂಲಕ ಸುರಕ್ಷಿತವಾಗಿರುತ್ತವೆ. ಡಿಜಿಟಲ್ ಸಹಿ ಮಾಡಿದ ನಂತರ ಯಾವುದೇ ಬದಲಾವಣೆ ಪತ್ತೆಯಾಗಲಿದೆ ಎಂದು ಅವರು ತಿಳಿಸಿದರು.

ಕಾಗದ ರಹಿತ ನೋಂದಣಿಗೆ ಚಾಮರಾಜನಗರ ಜಿಲ್ಲೆಯಿಂದಲೇ ಚಾಲನೆ ನೀಡಿದ್ದು, ಇನ್ನು ಎರಡು ಮೂರು ತಿಂಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಈ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿ ಮಾಡಲಾಗುತ್ತದೆ. ಸಾರ್ವಜನಿಕರಿಗೆ ನೇರವಾಗಿ ಈ ವ್ಯವಸ್ಥೆಯಡಿಯಲ್ಲಿ ತಮ್ಮ ಅಸ್ತಿಗಳನ್ನು ನೋಂದಣಿ ಮಾಡಲು ಅವಕಾಶ ಇದೆ. ಎಲ್ಲವು ಆಧಾರ್ ಬೇಸ್ ಮೇಲೆ ನಡೆಯುತ್ತದೆ. ಇದರಿಂದ ಯಾವುದೇ ರೀತಿ ಮೋಸ ಆಗುವುದಿಲ್ಲ ಎಂದರು.

      ಕಾವೇರಿ 2.0 ಪೋರ್ಟಲ್‍ನಡಿ ಅನುಷ್ಠಾನವಾಗುತ್ತಿರುವ ಕಾಗದರಹಿತ ನೋಂದಣಿ ಪ್ರಕ್ರಿಯೆ ಸರಳ, ಪಾರದರ್ಶಕ ಹಾಗೂ ಸಮಯ ಉಳಿತಾಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ನೂತನ ವ್ಯವಸ್ಥೆಯು ಡಿಜಿಟಲ್ ಭವಿಷ್ಯದತ್ತ ಒಂದು ಮಹತ್ವದ ಹೆಜ್ಜೆಯಾಗಿದ್ದು, ತಂತ್ರಜ್ಞಾನದ ಮೂಲಕ ಸಾರ್ವಜನಿಕ ಸೇವೆಗಳನ್ನು ಸುಧಾರಿಸಲು ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಕಾಗದರಹಿತ ನೋಂದಣಿ ವ್ಯವಸ್ಥೆಯ ಮೂಲಕ ಪಾರದರ್ಶಕತೆ, ವೇಗ ಮತ್ತು ನಾಗರಿಕರಿಗೆ ಅನುಕೂಲ ಹೆಚ್ಚುವ ಉದ್ದೇಶವನ್ನು ನಮ್ಮ ಸರ್ಕಾರ ಹೊಂದಿದೆ ಎಂದು ಹೆಳಿದರು.

ಇದೇ ವೇಳೆ ಜಿಲ್ಲಾ ಪತ್ರ ಬರಹಗಾರರ ಸಂಘದವರು ತಮ್ಮ ಬೇಡಿಕೆಗಳ ಕುರಿತ ಮನವಿಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಿಗೆ ಸಲ್ಲಿಸಿದರು.  

ನೋಂದಣಿ ಉಪ ಮಹಾಪರಿವೀಕ್ಷಕರಾದ ಎಚ್.ಎನ್.  ಪ್ರಭಾಕರನ್, ಚಾಮರಾಜನಗರ ಜಿಲ್ಲಾ ನೋಂದಣಾಧಿಕಾರಿ ಕಿರಣ್, ಮಂಡ್ಯ ಜಿಲ್ಲಾ ನೋಂದಣಾಧಿಕಾರಿ ಎಸ್. ಸಿದ್ದೇಶ್, ಕೇಂದ್ರ ಸ್ಥಾನಿಕ ಸಹಾಯಕರಾದ ಬಿ.ಜಿ. ಮಂಜುನಾಥ್, ಚಾ. ನಗರ ಉಪ ನೋಂದಣಾಧಿಕಾರಿ ರಾಘವೇಂದ್ರ, ಗುಂಡ್ಲುಪೇಟೆ ಉಪ ನೋಂದಣಾಧಿಕಾರಿ ಆರ್. ರಾಜೇಂದ್ರ ಪ್ರಸಾದ್, ತಾಲೂಕು  ಪತ್ರಬರಗಾರರ ಸಂಘದ ಅಧ್ಯಕ್ಷ  ನಂದೀಶ್ವರಸ್ವಾಮಿ,  ಪ್ರಧಾನ ಕಾರ್ಯದರ್ಶಿ  ಮಹದೇವಸ್ವಾಮಿ ಕೋರಿಯರ್, ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular