ನವದೆಹಲಿ: ವೈದ್ಯಕೀಯ ಪ್ರವೇಶಾತಿ ಕೋರ್ಸ್ಗಳಿಗಾಗಿ ನಡೆದ ನೀಟ್-ಯುಜಿ 2026 ಪರೀಕ್ಷೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿಯನ್ನು ಹಬ್ಬಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ನೀಟ್-ಯುಜಿ 2026 ಮರುಪರೀಕ್ಷೆ ನಡೆಯಲಿದೆ ಎಂಬ ವದಂತಿಗಳು ಹಾಗೂ ಕೆಲವು ನಕಲಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸಂಸ್ಥೆಯ ಗಮನಕ್ಕೆ ಬಂದಿದೆ. ಈ ಎಲ್ಲಾ ಮಾಹಿತಿಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತವಾಗಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಇವುಗಳನ್ನು ನಂಬಬಾರದು ಎಂದು ಎನ್ಟಿಎ ಸ್ಪಷ್ಟಪಡಿಸಿದೆ.
ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವುದು, ತಪ್ಪು ಮಾಹಿತಿ ನೀಡುವುದು ಅಥವಾ ಉದ್ದೇಶಪೂರ್ವಕವಾಗಿ ವದಂತಿಗಳನ್ನು ಹರಡುವುದು ಗಂಭೀರ ಅಪರಾಧವಾಗಿದ್ದು, ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ನೀಟ್ ಪರೀಕ್ಷೆಯನ್ನು ಸಂಪೂರ್ಣ ಪಾರದರ್ಶಕತೆ, ಭದ್ರತೆ ಮತ್ತು ಕಟ್ಟುನಿಟ್ಟಿನ ಮೇಲ್ವಿಚಾರಣೆಯೊಂದಿಗೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಎನ್ಟಿಎ ತಿಳಿಸಿದೆ. ಯಾವುದೇ ಮಾಹಿತಿಗಾಗಿ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ ಅನ್ನು ಮಾತ್ರ ಪರಿಶೀಲಿಸಬೇಕು ಹಾಗೂ ಪರಿಶೀಲಿಸದ ಸುದ್ದಿಗಳು ಮತ್ತು ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಿದೆ. 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಂತತೆ ಮತ್ತು ಸಹನೆಯಿಂದ ವರ್ತಿಸಬೇಕು ಎಂದು ಎನ್ಟಿಎ ಕೋರಿದೆ.



